ಸ್ಟೇಟಸ್ ಕತೆಗಳು (ಭಾಗ ೭೫೩) - ತಪ್ಪು

ಸ್ಟೇಟಸ್ ಕತೆಗಳು (ಭಾಗ ೭೫೩) - ತಪ್ಪು

ನೆಲದ ನೋವಿಗೆ ಮುಲಾಮ ಬೇಕಾಗಿದೆ. ಪ್ರತಿಯೊಬ್ಬರೂ ನೋವು ನೀಡುವವರೇ, ಆಗಾಗ ನಿಂತು ಗಮನಿಸಿ ಅಯ್ಯೋ ಪಾಪ ಎಂದು ನೋಡಿ ಹೊರಡುವವರೇ ಹೊರೆತು ಗಾಯಕ್ಕೆ ಔಷಧ ನೀಡುವವರಿಲ್ಲ. ಕಟಾವಿಗಾಗಿ ಬೆಳೆದು ನಿಲ್ಲಬೇಕಾದ ಬೆಳೆಗಳ ಬೇರುಗಳನ್ನು ತನ್ನ ಒಳಗೆ ಇಳಿಸಿಕೊಂಡು ಸಮೃದ್ಧವಾದ ಆಹಾರ ಉತ್ಪನ್ನಗಳನ್ನು ನೀಡುತ್ತಿದ್ದ ನೆಲವಿಂದು ಬರೀ ಕಾಂಕ್ರೀಟ್ ಪರದೆಗಳನ್ನ ಹಾಕಿಸಿಕೊಂಡಿದೆ. ಅದಕ್ಕೂ ಆಗಾಗ ಬಾಯಾರಿಕೆಯಾಗುತ್ತದೆ. ಅದಕ್ಕೆ ಆಗಾಗ ಇಡೀ ತನ್ನ ಒಡಲನ್ನು ತೆರೆದು ಎಲ್ಲವನ್ನ ನುಂಗುತ್ತದೆ. ನಾವೆಲ್ಲರೂ ನಡೆದಾಡಿದ್ದೇವೆ ಬೇಕಾದನ್ನು ಪಡೆದುಕೊಂಡಿದ್ದೇವೆ. ಏನು ನೀಡಿದ್ದೇವೆ ಅನ್ನೋದರ ಬಗ್ಗೆ ಯೋಚನೆ ಮಾಡಿದರೆ ಪಡೆದುಕೊಂಡದ್ದೇ ಜಾಸ್ತಿ. ಯಾವತ್ತೂ ಒಂದು ದಿನವಾದರೂ ಈ ಭೂಮಿ ಕೊಟ್ಟ ಸಾಲವನ್ನು ತೀರಿಸುವುದಕ್ಕೆ ಪ್ರಯತ್ನಪಟ್ಟಿದ್ದೇವಾ? ನಾವು ಯಾವುದೇ ಋಣದಲ್ಲಿ ಇಲ್ಲವೆಂದೇ ಬದುಕುತ್ತಿದ್ದೇವೆ. ನೆಲದ ಮಾತನ್ನ ಕೇಳುವವರು ಯಾರು? ಒಂದು ದಿನವೂ ನೆಲಕ್ಕೆ ಕಿವಿಯಾನಿಸಿ ಕೇಳಿಲ್ಲ. ನಾವೆಲ್ಲರೂ ಸಾಲಗಾರರೇ ಋಣದಲ್ಲಿರುವವರೇ. ನಾವು ಮಾಡಿದ ಗಾಯಕ್ಕೆ ಇಂತಿಷ್ಟಾದರೂ ಔಷಧಿಯನ್ನು ಹಚ್ಚಿ ನೆಲವನ್ನ ಆರೋಗ್ಯ ಪೂರ್ಣವಾಗಿರಿಸಿ ಮುಂದಿನವರಿಗೆ ದಾಟಿಸುವ ಜವಾಬ್ದಾರಿಯು ನಮ್ಮದೇ. ಮರೆತಿದ್ದೇವೆ, ಸಾಗುತ್ತಿದ್ದೇವೆ ಒಂದು ದಿನ ಈ ನೆಲ ನೆನಪಿಸುತ್ತದೆ. ಮತ್ತೆ  ಚೈತನ್ಯ ಭರಿತವಾಗಿ ಮೇಲೆದ್ದು ನಿಲ್ಲುತ್ತೆ. ಮತ್ತೆ ಹಸಿರು ಕಂಗೊಳಿಸಿ ಮೂಲದಿಂದಲೇ ಸೃಷ್ಟಿಕ್ರಿಯೆ ಆರಂಭವಾಗುತ್ತದೆ. ಅದಾಗುವುದಕ್ಕಿಂತ ಮೊದಲು ಎಚ್ಚೆತ್ತುಕೊಂಡರೆ ಒಂದಷ್ಟು ಸಮಯ ಹೆಚ್ಚು ಬದುಕಬಹುದು?

ಎಚ್ಚರವಾಯಿತು .. ಮಾಡಿದ ತಪ್ಪುಗಳು ಕಣ್ಣ ಮುಂದೆ ಸಾಲು ಸಾಲಾಗಿ ಬರೋದಕ್ಕೆ ಆರಂಭವಾದವು. ಒಂದಷ್ಟು ತಿದ್ದಿಕೊಳ್ಳುತ್ತೇನೆ ಅನ್ನುವ ದೃಢ ನಿರ್ಧಾರ  ಮನಸಲ್ಲಿ ಉಳಿದುಬಿಟ್ಟಿತು.. ಉಳಿದದ್ದು ನಾಳೆ ಬೆಳಗ್ಗೆ ಬಿಟ್ಟದ್ದು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ