ಸ್ಟೇಟಸ್ ಕತೆಗಳು (ಭಾಗ ೭೫೪) - ಮಗುವಾಗಬೇಕು

ಸ್ಟೇಟಸ್ ಕತೆಗಳು (ಭಾಗ ೭೫೪) - ಮಗುವಾಗಬೇಕು

ಮಗುವನ್ನ ಅಂಗಳದಲ್ಲಿ ಆಡೋಕೆ ಬಿಟ್ಟು ಸ್ವಲ್ಪ ಸಮಯವಾಗಿತ್ತು ಅಷ್ಟೇ, ಮನೆಯವರೆಲ್ಲರೂ ಅವರವರ ಕೆಲಸದಲ್ಲಿ ತಲ್ಲೀನರಾಗಿಬಿಟ್ಟರು. ಮಗು ಹಾಡುತ್ತಾ ಓಡುತ್ತಾ ಒಂದು ಸಾರಿ ಬಿದ್ದು ಸಣ್ಣದಾಗಿ ಅಳೋದಕ್ಕೆ ಆರಂಭ ಮಾಡುತ್ತದೆ.  ಸುತ್ತ ಮುತ್ತ ಯಾರಿಲ್ಲದಿದ್ದಾಗ ನೋವು ಮಾಯವಾಯಿತು. ಮತ್ತೆ ಆಟ ಆರಂಭವಾಯಿತು. ಅದಕ್ಕಿಂತ ಜೋರಾಗಿ ಬಿದ್ದರೂ ಕೂಡ ಮಗು ಅಳೋದನ್ನ ಶುರು ಮಾಡಲೇ ಇಲ್ಲ. ಆಟವನ್ನು ಮಾತ್ರ ತುಂಬಾ ಪ್ರೀತಿಯಿಂದ ಆಡೋದ್ದಕ್ಕೆ ಆರಂಭ ಮಾಡಿತು. ಎತ್ತರವನ್ನು ಏರಿತು, ಕೆಳಗೆ ಬಿತ್ತು,  ಕೆಸರಾಯ್ತು ಮಣ್ಣಾಯ್ತು ತರಚಿದ ಗಾಯವಾಯಿತು ಆದರೂ ಮಗುವಿಗೆ ಅದು ಯಾವುದರ ಯೋಚನೆಯೂ ಇರಲಿಲ್ಲ. ಕೆಲಸ ಮುಗಿಸಿ ಹೊರಗೆ ಬಂದ ಅಮ್ಮನಿಗೆ ಮಗುವಿನ ಅವಸ್ಥೆ ನೋಡಿ ಒಂದು ಸಲ ಹೆದರಿಕೆ ಹತ್ತಿರ ಹೋಗಿ ಮಗುವನ್ನ ಎತ್ತಿಕೊಂಡು ಏನಾಯಿತು ಮಗಾ? ಎಂದು ಕೇಳಿದಾಗ ಮಗು ಅಳುವುದಕ್ಕೆ ಆರಂಭ ಮಾಡಿತು. ಆರೈಕೆ  ಮಾಡುವವರು ಸಿಗದೇ ಇದ್ದಾಗ ಸಣ್ಣ ಮಗುವಿಗೆ ಯಾವ ನೋವು ನೊವು ಅನ್ನಿಸಲೇ ಇಲ್ಲ. ಪ್ರತೀ ಸಲಾನೂ ನಮ್ಮ ನೋವಿಗೆ ಒಬ್ಬರು ಸಮಾಧಾನ ಮಾಡೋರು ಇರಬೇಕಿತ್ತು ಅಂತ ಬಯಸುವ ಮನಸ್ಸಿದೆಯಲ್ಲ ಅದು ನೋವನ್ನು ಹೆಚ್ಚು ಮಾಡುತ್ತಾ ಹೋಗುತ್ತೆ. ಯಾರೂ ಇಲ್ಲದೆ ಇದ್ದಾಗ ಎಂಥಾ ನೋವಿದ್ದರೂ ಕೂಡ ಹಾಗೆ ಮಾಯವಾಗುತ್ತೇ. ಈ ಮಗುವಿನಿಂದ ಬದುಕಿನ ರೀತಿಯನ್ನು ಕಲಿಯಬೇಕು. ಆತ್ಮೀಯರು ಸಿಕ್ಕಿದಾಗ ಒಂದು ಸಲ ದುಃಖವನ್ನು ಹೊರಗೆ ಹಾಕಿ ಮತ್ತೆ ದಾರಿಯನ್ನ ನೋಡಿಕೊಳ್ಳಬೇಕು. ಅದಕ್ಕೆ ಹೇಳೋದು ಆಗಾಗ ಮಗುವಾಗಬೇಕು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ