ಸ್ಟೇಟಸ್ ಕತೆಗಳು (ಭಾಗ ೭೫೫) - ಹಸಿವು
ಹೊಟ್ಟೆಯ ಹಸಿವು ಒಂದೊಂದು ದಾರಿಯ ಕಡೆಗೆ ಒಬ್ಬೊಬ್ಬರನ್ನು ಕರೆದೊಯ್ಯುತ್ತಾ ಇತ್ತು. ಅವರಲ್ಲಿ ಒಬ್ಬ ಚೆನ್ನಾಗಿ ಹಾಡ್ತಾ ಇದ್ದ, ಒಬ್ಬ ಬರೀತಾ ಇದ್ದ, ಇನ್ನೊಬ್ಬ ಕುಣಿತಾ ಇದ್ದ, ನುಡಿಸುತ್ತಿದ್ದ, ಬಿಡಿಸುತ್ತಿದ್ದ. ಪ್ರದರ್ಶನಕ್ಕೆ ಅವರಿಗೆ ಅವಕಾಶ ಅನ್ನೋದು ಸಿಗಲಿಲ್ಲ. ಹೊಟ್ಟೆ ಹಸಿವು ಇದ್ದಾಗ ಮೈ ಬಗ್ಗಿಸಿ ದುಡಿಯೋದು ಅನಿವಾರ್ಯವಾಯಿತು. ಕಲೆ ಪ್ರತಿಭೆಗೆ ವೇದಿಕೆ ಅನ್ನೋದು ಅವರಿಗೆ ಅವರ ಕಣ್ಣ ಮುಂದೆ ಕಾಣಲೇ ಇಲ್ಲ. ತಟ್ಟೆಯಲ್ಲಿ ಒಂದಷ್ಟು ಅನ್ನ ಅದರ ಮೇಲೆ ಒಂದಿಷ್ಟು ಸಾರು ಸುರಿದುಕೊಂಡು ಹೊಟ್ಟೆಗೆ ಇಳಿಸಿಕೊಳ್ಳಬೇಕು ಅನ್ನೋದಷ್ಟೇ ಅವರ ಗುರಿಯಾಗಿತ್ತು. ಹೆಸರು ಸಂಪಾದನೆ, ಕೀರ್ತಿ ಕಲಾಸೇವೆ ಇದ್ಯಾವುದು ಅವರ ಪಟ್ಟಿಯಲ್ಲಿ ಇರಲಿಲ್ಲ. ಹಸಿವಿನಿಂದಾಗಿ ಕಲೆ ಅವರನ್ನು ಕಳೆದುಕೊಂಡಿತೋ ಅಥವಾ ಅವರು ಕಲೆಯನ್ನು ಕಳೆದುಕೊಂಡರು ಗೊತ್ತಾಗ್ಲಿಲ್ಲ. ಒಟ್ಟಿನಲ್ಲಿ ಹಸಿವು ಒಂದಷ್ಟು ವೇದಿಕೆಗಳನ್ನ ದೂರ ಮಾಡಿದ್ದು ಆ ಮನಸ್ಸುಗಳಿಗೆ. ಆಗಾಗ ದಾರಿಯಲ್ಲಿ ಹಾದು ಹೋಗುವಾಗ ಎಲ್ಲವನ್ನು ಆನಂದಿಸಿ ಚಪ್ಪಾಳೆ ಹೊಡೆದು ಮನೆಗೆ ಹೊರಡುತ್ತಾರೆ. ಕೆಲವೊಂದು ಸಲ ತುಂಬಾ ಖುಷಿಯಾಗಿ ನಿಂತು ನೋಡೋಣ ಅಂದುಕೊಂಡರು ಮಾರನೇ ದಿನದ ಜವಾಬ್ದಾರಿ ಕರೆದು ಮನೆ ಕಡೆಗೆ ನಡೆದು ಬಿಡುತ್ತಾರೆ. ಹಾಗಾಗಿ ದಾರಿಯ ಸಿಗುವ ಪ್ರತಿಯೊಬ್ಬನಲ್ಲೂ ಅವನ ಬದುಕಿನ ಅನಿವಾರ್ಯತೆಗಾಗಿ ಆತ ಯಾವುದನ್ನೋ ಕಳೆದುಕೊಂಡಿದ್ದಾನೆ. ನಾವು ಕಳೆದುಕೊಂಡಿದ್ದೇವೆ. ನಮ್ಮ ಬದುಕಿನ ಅನಿವಾರ್ಯತೆಗೆ ಒಂದು ಪಡೆದುಕೊಳ್ಳುವುದಕ್ಕೆ ಇನ್ನೊಂದನ್ನು ಕಳೆದುಕೊಳ್ಳಬೇಕು ಅಂತ ದೊಡ್ಡವರು ಹೇಳ್ತಾರೆ. ಕೆಲವೊಂದು ಸಲ ಅದಕ್ಕೆ ಅದ್ಭುತವಾದದ್ದನ್ನೇ ಕಳೆದುಕೊಂಡು ಬಿಡುತ್ತೇವೆ. ಒಟ್ಟಿನಲ್ಲಿ ನಾವೆಲ್ಲರೂ ಕಳೆದುಕೊಂಡವರೇ. ಕಳೆದುಕೊಂಡದರ ಮೌಲ್ಯ ಸಣ್ಣದು ದೊಡ್ಡದು ಇರಬಹುದು. ಹಾಗಾಗಿ ನಿಮ್ಮಲ್ಲೊಂದು ಬೇಡಿಕೆ, ಸಾಧ್ಯವಾದದ್ದನ್ನ ಚೂರಾದರೂ ಉಳಿಸಿಕೊಂಡು ಬದುಕೋಕೆ ಕಲಿಯೋಣ. ಕಳೆದುಕೊಂಡು ಸಮಯವಾದ ಮೇಲೆ ಮತ್ತೆ ಹಿಂತಿರುಗಿ ನೋಡಿದಾಗ ದಾರಿ ತುಂಬ ಸವೆದಿರುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ