ಸ್ಟೇಟಸ್ ಕತೆಗಳು (ಭಾಗ ೭೫೮) - ಕಾಡು
ಕಾಡು ಕಾಯುತ್ತಿದೆ. ಹಲವು ಸಮಯದಿಂದ ಕಾಡು ತನ್ನ ಗೆಳೆಯನ ಸೇರುವುದಕ್ಕೆ ಕಾಯ್ತಾ ಇದೆ. ಕಾರಣ ಇಷ್ಟೇ. ಇತೀಚೆಗೆ ಜನರ ಓಡಾಟಕ್ಕೆ ಅಂತ ಮಧ್ಯದಲ್ಲೊಂದು ರಸ್ತೆಯನ್ನು ಆರಂಭಿಸಿ ಬಿಟ್ಟಿದ್ದಾರೆ. ಆತ್ಮೀಯ ಗೆಳೆಯರನ್ನು ದೂರ ಮಾಡಿಬಿಟ್ಟಿದ್ದಾರೆ. ಎಲೆಗಳು ಒಂದಕ್ಕೊಂದು ಸ್ಪರ್ಷಿಸಿಕೊಂಡು ಆಗಾಗ ಮಾತನಾಡುತ್ತಿದ್ದವು. ಆದರೂ ಹತ್ತಿರ ಆತ್ಮೀಯರಾಗಿ ನಿಲ್ಲೋದಕ್ಕೆ ಸಾಧ್ಯವಾಗಲೇ ಇಲ್ಲ. ಜೊತೆಗೆ ಒಂದಷ್ಟು ಸಹವರ್ತಿಗಳನ್ನ ಕೊಂದು ಕಳುಹಿಸಿ ಬಿಟ್ಟಿದ್ದಾರೆ. ಅದಕ್ಕೆ ರಸ್ತೆ ಕಾಯ್ತಾ ಇದೆ ಯಾವಾಗ ಇಲ್ಲಿ ಜನರ ಓಡಾಟ ಕಡಿಮೆಯಾಗುತ್ತದೆ ಅನ್ನೋದಕ್ಕೆ. ಒಂದಲ್ಲ ಒಂದು ದಿನ ನಾವು ಪೂರ್ತಿಯಾಗಿ ಆವರಿಸಿಕೊಳ್ಳುತ್ತೇವೆ ಅಂತ? ಹೀಗೆ ಕಾಡು ಚಿಂತಿಸುವುದಕ್ಕೂ ಕಾರಣವಿದೆ. ಕಾಡು ವ್ಯರ್ಥವಾದದ್ದನ್ನ ಏನನ್ನೂ ಸೃಷ್ಟಿಸುವುದಿಲ್ಲ. ಆದರೆ ಮನುಷ್ಯ ವ್ಯರ್ಥವಾದದ್ದನ್ನ ಆ ಕಾಡಿನ ಬದಿಗಳಲ್ಲಿ ಸುರಿದು ಕಾಡಿಗೆ ಅಸಹ್ಯ ಹುಟ್ಟಿಸುತ್ತಿದ್ದಾನೆ. ಅದಕ್ಕಾಗಿ ಮನುಷ್ಯರನ್ನ ದೂರ ಸರಿಸಿ ತಾನು ಸ್ವಚ್ಛವಾಗಿ ಬದುಕಬೇಕೆನ್ನುವ ಆಸೆಗಾಗಿ ಕಾಡು ಎಲ್ಲವನ್ನು ಆವರಿಸಿಕೊಳ್ಳುವುದಕ್ಕೆ ಕಾಯುತ್ತಿದೆ. ನಮಗೆ ಬುದ್ಧಿ ಇಲ್ಲ. ಶಿಕ್ಷಣ ಪಡೆದು ಮೇಧಾವಿಗಳಾಗಿ ಇದ್ದರೂ ಕೂಡ ನಾವು ಮಾಡೋದು ಕೆಟ್ಟ ಕೆಲಸವೇ? ಕಾಡು ಆವರಿಸಿಕೊಳ್ಳುವ ಮುನ್ನ ಒಂದಷ್ಟು ಎಚ್ಚರಿಕೆಯಿಂದ ಬದುಕಬೇಕು. ಕಾಡನ್ನ ಕಂಡಾಗ ನನಗನಿಸಿದ ಮಾತನ್ನ ನಿಮ್ಮ ಮುಂದೆ ಇಟ್ಟಿದ್ದೇನೆ... ಯೋಚಿಸಿ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ