ಸ್ಟೇಟಸ್ ಕತೆಗಳು (ಭಾಗ ೭೫೯) - ಕಾಲಮಿತಿ
ಮತ್ತೆ ಕನ್ನಡಿಯ ಒಳಗೆ ನನ್ನ ಮುಖವನ್ನು ನೋಡಿಕೊಳ್ಳುವ ಭಾಗ್ಯ ಸಿಗುತ್ತೆ ಅಂತ ಅಂದುಕೊಂಡಿರಲಿಲ್ಲ. ದಿನವೂ ನೋಡುವ ತರ ಕನ್ನಡಿಯೊಳಗೆ ನನ್ನ ಮೊಗವನ್ನ ಗಮನಿಸುವುದಲ್ಲ. ಮುಖಕ್ಕೆ ಒಂದಿಷ್ಟು ಬಣ್ಣದ ಚಿತ್ತಾರ, ಹೊಸತೊಂದು ಪಾತ್ರದ ಪರಕಾಯ ಪ್ರವೇಶ, ನಾನಿಷ್ಟರವರೆಗೆ ಪ್ರೀತಿಸಿ ಗೌರವಿಸುತ್ತಿದ್ದ ಪಾತ್ರಕ್ಕೊಂದು ನ್ಯಾಯ ಕೊಡುವ ಪುಟ್ಟವಕಾಶ. ಆ ಬಣ್ಣವನ್ನ ಮುಖಕ್ಕೆ ಹಚ್ಚಿಕೊಳ್ಳುವಾಗ, ವೇದಿಕೆಯ ಮೇಲೇರುವಾಗ, ಮಾತನಾಡುವಾಗ, ಆ ಪಾತ್ರಕ್ಕೆ ಪರಿಪೂರ್ಣತೆ ಒದಗಿಸಿದಾಗ ಮನಸ್ಸಿನೊಳಗೊಂದು ಸಂಭ್ರಮದ ಚಿಟ್ಟೆ ಹಾರಾಡುತ್ತದೆ, ಅದೇನೋ ನೆಮ್ಮದಿ ಒಂದು ಸಲ ಉಸಿರಾಡಿ ದೇಹವಿಡೀ ಓಡಾಡುತ್ತದೆ. ಇಂತಹ ಅವಕಾಶಗಳು ಆಗಾಗ ಸಿಗ್ಲಿ ಅಂತ ಪ್ರಾರ್ಥಿಸುವುದು ಮಾತ್ರ ನಮ್ಮ ಕೈಯಲ್ಲಿದೆ. ಭಗವಂತ ಮೊದಲೇ ನಿರ್ಧರಿಸಿರುತ್ತಾನೆ. ದಾರಿಯಲ್ಲಿ ಸಾಗುತ್ತಿರುವಾಗ ಒಂದಷ್ಟು ಕಡೆ ತಿರುಗುಗಳನ್ನು ಕೊಟ್ಟು ಅಲ್ಲೊಂದಿಷ್ಟು ವೇದಿಕೆಗಳನ್ನು ನಿರ್ಮಿಸಿ ನನ್ನನ್ನ ಬೆಳಕಿಗೆ ತಂದು ಮತ್ತೆ ದಾರಿಯಲ್ಲಿ ಸಾಗುವಂತೆ ಮಾಡುತ್ತಾನೆ .ಯಾವುದಕ್ಕೂ ವ್ಯಥೆಪಟುಕೊಳ್ಳಬೇಕಾಗಿಲ್ಲ. ಪ್ರಯತ್ನಗಳನ್ನ ಪಡ್ತಾ ಹೋಗಬೇಕು... ಎಲ್ಲದ್ದಕ್ಕೂ ಕಾಲಮಿತಿ ಇದ್ದೇ ಇದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ