ಸ್ಟೇಟಸ್ ಕತೆಗಳು (ಭಾಗ ೭೬೧) - ನೋವಿದೆಯಾ?

ಸ್ಟೇಟಸ್ ಕತೆಗಳು (ಭಾಗ ೭೬೧) - ನೋವಿದೆಯಾ?

ಅದೊಂದು ದೊಡ್ಡ ಸ್ಪರ್ಧೆ. ಅದಕ್ಕೆ ಬೇರೆ ಬೇರೆ ಭಾಗದ ಹಾಡುಗಾರರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಕೆ ಹಾಡಿನಲ್ಲಿ ಹೊಸ ರೀತಿಯ ಬದುಕನ್ನ ಕಟ್ಟಿಕೊಳ್ಳಬೇಕು ಅನ್ನುವ ಆಸೆಯನ್ನು ಕೂಡ ಹೊಂದಿದ್ದವಳು. ಪ್ರತಿಯೊಂದು ಹಂತದಲ್ಲೂ ಉತ್ತೀರ್ಣಳಾಗಿ ಅಂತಿಮ ಹಂತ ಪ್ರವೇಶಿಸಿದಳು. ಟಿವಿಯೊಳಗೆ ಕಾಣಿಸಿಕೊಳ್ಳುವ ದಿನಕ್ಕಿಂತ ಹಿಂದಿನ ದಿನದವರೆಗೂ ಆಕೆ ಮುಂಚೂಣಿಯಲ್ಲಿದ್ದಳು. ಆ ದಿನ  ಅವಳಲ್ಲಿ ಒಂದಷ್ಟು ಪ್ರಶ್ನೆಗಳನ್ನೇ ಕೇಳಲಾಯಿತು. ನಿಮ್ಮ ಮನೆಯಲ್ಲಿ ಯಾವುದಾದರೂ ಸಮಸ್ಯೆಗಳಿವೆಯೇ? ಇಲ್ಲ ,ನಿಮಗೆ ಯಾವುದಾದರೂ ತೊಂದರೆಗಳಿವೆ? ಇಲ್ಲ, ನಿಮ್ಮ ಜೀವನದ ಯಾವುದಾದರೂ ನೋವಿನ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿವೆಯೇ? ಇಲ್ಲ, ನಿಮ್ಮ ಈ ಗುರಿನ ತಲುಪುವುದಕ್ಕೆ ನೀವು ಹಲವಾರು ವಿಚಾರಗಳನ್ನ ಕಳೆದುಕೊಂಡಿದ್ದೀರಿ? ಇಲ್ಲ, ಈ ಅವಕಾಶ ಸಿಗದಿದ್ರೆ ನೀವು ಜೀವನದಲ್ಲಿ ಯಾವುದಾದರೂ ವಿಚಾರಗಳನ್ನು ಕಳೆದುಕೊಳ್ಳುವಿರಾ? ಇಲ್ಲ, ನಿಮ್ಮ ಕಣ್ಣೀರು ಆಗಾಗ ಈ ಕಾರ್ಯಕ್ರಮದಲ್ಲಿ ನಮಗೆ ಉಪಯೋಗವಾಗಬಹುದೇ? ಇಲ್ಲ ,ಈ ಇಷ್ಟು ಪ್ರಶ್ನೆಗಳಲ್ಲಿ ಯಾವುದು ಇಲ್ಲವಾದ ಕಾರಣ ನಿಮ್ಮನ್ನ ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗುವುದಿಲ್ಲ. ಅನ್ನುವುದು ಅವರು ಉತ್ತರವಾಗಿತ್ತು. ಅವರಿಗೆ ಹಾಡುಗಾರರು ಬೇಕು ಆದರೆ ಒಂದಷ್ಟು ನಾಟಕಗಳನ್ನು ಕಟ್ಟಿಕೊಳ್ಳುವುದಕ್ಕೆ ಜನರ ಅವಶ್ಯಕತೆಯೂ ಇದೆ .ಜೀವನ ನೋವು ಬದುಕು ಕಷ್ಟ ಎಲ್ಲವೂ ಜೊತೆಯಾಗಿದ್ದು ಒಂದಿಷ್ಟು ಕಣ್ಣೀರ ಹನಿಗಳು ನೋವಿನ ಮಾತುಗಳು ಎಲ್ಲವೂ ಇದ್ದಾಗ ಕಾರ್ಯಕ್ರಮ ಇನ್ನೂ ಹೆಚ್ಚಿನ ರಂಜನೀಯವಾಗುತ್ತದೆ. ಹಾಗಾಗಿ ಆಕೆ ಅವಕಾಶಗಳನ್ನ ಕಳೆದುಕೊಂಡು ಮತ್ತೆ ಮನೆ ಕಡೆ ನಡೆದಳು. ಅವಳಲ್ಲಿ ಕೇಳಿದಾಗ ಅವಳು ಹೇಳಿದ್ದು ಇಷ್ಟೆ ನನ್ನ ಜೀವನ ಅದು ನನ್ನಿಷ್ಟ ಅದನ್ನ ವೇದಿಕೆಯ ಮೇಲೆ ಏರಿ ಸಾವಿರ ಜನರ ಮುಂದೆ ನಾನು ಹೇಳುವುದಿಲ್ಲ. ಹಾಗಾಗಿ ಆ ವೇದಿಕೆ ನನಗೆ ಅವಶ್ಯಕತೆ ಇಲ್ಲ. ಅಂತ ಹೊರ ನಡೆದಳು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ