ಸ್ಟೇಟಸ್ ಕತೆಗಳು (ಭಾಗ ೭೬೬) - ಸುದ್ದಿ
ದಿನವೂ ಅಷ್ಟೇನೂ ಪತ್ರಿಕೆ ಗಮನಿಸಿದ ನನಗೆ ಆ ದಿನ ಪತ್ರಿಕೆಯ ಮುಖಪುಟದಲ್ಲಿ ರಾರಾಜಿಸುವ ಸುದ್ದಿ ಕಂಡು ಒಂದಷ್ಟು ವಿಶೇಷ ಅನ್ನಿಸಿತು. ಅದ್ಯಾವುದೋ ಹುಲಿ ಉಗುರು ಹಾಕಿಕೊಂಡಿದ್ದವನ ಬಂದಿಸಿದ್ದರಂತೆ ಪೊಲೀಸರು. ಆತ ಪ್ರಾಣಿ ಹಿಂಸೆ ಮಾಡಿದ್ದಾನೆ, ಇನ್ನೊಂದಷ್ಟು ಜನರಿಗೆ ತನ್ನ ಅಹಂಕಾರವನ್ನು ಪ್ರದರ್ಶಿಸಿದ್ದಾನೆ ಅನ್ನೋದು ಅದರ ದೊಡ್ಡ ಸುದ್ದಿ. ವನ್ಯಜೀವಿ ಸಂರಕ್ಷಣೆಯವರು ಅವನ ಮೇಲೆ ದೊಡ್ಡದಾಗಿ ಕೇಸನ್ನು ಕೂಡ ದಾಖಲೆ ಮಾಡಿಬಿಟ್ಟಿದ್ದರು. ತುಂಬಾ ಒಳ್ಳೆಯ ವಿಷಯ ಪ್ರಾಣಿಗಳು ಉಳಿಯಬೇಕು. ನಮ್ಮೂರಿನಲ್ಲಿ ಕಾರಣವಿಲ್ಲದೆ ಸತ್ತ ಒಂದಷ್ಟು ಕಾಡು ಪ್ರಾಣಿಗಳ ಬಗ್ಗೆ ಎಲ್ಲೂ ಕೂಡ ಸುದ್ದಿ ಆಗಲೇ ಇಲ್ಲ. ರಸ್ತೆ ದಾಟುವಾಗ ವೇಗವಾಗಿ ಗುದ್ಧಿ ಮರಣ ಹೊಂದಿದ ಜಿಂಕೆ ಕಾಡೆಮ್ಮೆ ಇವುಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಆನೆಗಳಿಗೆ ನೋವು ನೀಡಿ ಅವುಗಳನ್ನ ತಮ್ಮಿಷ್ಟದಂತೆ ನಡೆಸಿಕೊಳ್ಳುವ ರೀತಿಯ ಬಗ್ಗೆಯೂ ಎಲ್ಲಿಯೂ ಮಾತುಗಳಿಲ್ಲ.ಕಾಡುಗಳೆಲ್ಲ ನಾಶ ಮಾಡಿ ದೊಡ್ಡ ಕಟ್ಟಡಗಳನ್ನ ಏರಿಸುವಾಗ ಕಾಡು ನಾಶದ ಬಗ್ಗೆ ಎಲ್ಲೂ ಸುದ್ದಿ ಆಗ್ತಾ ಇಲ್ಲ. ಮನೆಯೊಳಗಿನ ದನ ತಕ್ಷಣದಲ್ಲಿ ಮಾಯವಾಗಿ ಎಲ್ಲೋ ಒಂದು ಕಡೆ ಹೆಣವಾಗಿ ಹೋಗುವಾಗ ಯಾರಿಗೂ ಕಣ್ಣು ಕಾಣುವುದಿಲ್ಲ. ಊರ ಹೆಣ್ಣು ಮಗುವಿನ ಅತ್ಯಾಚಾರವಾಗಿ ಮರಣಹೊಂದಿದ ಬಗ್ಗೆ ಅದ್ಯಾರಿಗೂ ಪ್ರಚಾರವಿಲ್ಲದಿದ್ದರೆ ಸುದ್ದಿಯಾಗುವುದೇ ಇಲ್ಲ. ವನ್ಯಜೀವಿಗಳು ಅಳುವಿನಂಚಿನಲ್ಲಿದೆ ಹಾಗೆಯೇ ನಮ್ಮೂರ ಕಾಡು ನಡುವಿನಂಚಿನಲ್ಲಿದೆ. ಕಾಡಿನಲ್ಲಿ ಇನ್ನೊಂದಷ್ಟು ಜೀವಿಗಳು ಬದುಕ್ತಾ ಇದ್ದಾವೆ ತಾನೆ. ಅವರ ಕೈಲಿರುವ ಭೂತಕನ್ನಡಿಯ ಒಳಗೆ ಬೇರೆ ಯಾವುದೂ ಕಾಣುತ್ತಿಲ್ಲ.ಸರಿಯಾಗಿ ಸ್ವಚ್ಛಗೊಳಿಸಿ ವೀಕ್ಷಿಸಿದರೆ ಇನ್ನೊಂದಷ್ಟು ವಿಚಾರಗಳು ಕಾಣಿಸಬಹುದು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಅದರಲ್ಲಿ ದೊಡ್ಡವರು ಸಣ್ಣವರು ಇಲ್ಲ. ಜೊತೆಗೆ ಎಲ್ಲಾ ತಪ್ಪುಗಳಿಗೂ ಶಿಕ್ಷೆ ಆಗಬೇಕು ಹಾಗಾಗಿ ಇದು ಪತ್ರಿಕೆಯೊಳಗಿನ ಸುದ್ದಿಗೆ ಮಾತ್ರ ಸೀಮಿತವು ಒಂದಷ್ಟು ಬದಲಾವಣೆಯನ್ನು ತರುತ್ತದೋ... ಹೀಗೊಮ್ಮೆ ಯೋಚಿಸಿ ಹೊಸದೇನಾದರೂ ಸುದ್ದಿ ಇದೆಯೋ ಅಂದುಕೊಂಡು ಟಿವಿಯೊಳಗಡೆ ಕಣ್ಣು ಹಾಯಿಸಿದೆ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ