ಸ್ಟೇಟಸ್ ಕತೆಗಳು (ಭಾಗ ೭೬೯) - ಪ್ರೀತಿ

ಸ್ಟೇಟಸ್ ಕತೆಗಳು (ಭಾಗ ೭೬೯) - ಪ್ರೀತಿ

"ಮನಸ್ಯಾಕೆ ಬದಲಾಯಿತು? ನೀನು ಯಾವತ್ತೂ ಹೀಗೆ ಇರುತ್ತೇನೆ ಅಂತ ಹೇಳೇ ಇರ್ಲಿಲ್ಲ ಅಲ್ವಾ?" 

"ಅದು ಹೌದು ಆದರೆ ಒಂದಷ್ಟು ಮನೆಯ ಪರಿಸ್ಥಿತಿಯ ಬಗ್ಗೆ ಯೋಚಿಸ ಬೇಕಲ್ವಾ?" ಅಂತಂದು ಅವಳು ನಡೆದು ಬಿಟ್ಟಳು.  ಪುಟ್ಟ ಸಂಸಾರ ಅಮ್ಮ ಮಗಳು ಮತ್ತು ಅಪ್ಪ. ಅದೇನು ಕಾಲ ನಿರ್ಣಯವೋ ಗೊತ್ತಿಲ್ಲ. ಕೊರೊನಾ ಅನ್ನುವ ಭೀಕರ ಕಾಯಿಲೆ ಅಮ್ಮನನ್ನ ಅವರಿಬ್ಬರಿಂದ ದೂರ ಮಾಡಿತು. ಮಗಳು ನೆಮ್ಮದಿಯಾಗಿರಬೇಕು, ಮನೆಯಲ್ಲಿ ನೋಡಿಕೊಳ್ಳುವುದಕ್ಕೆ ಇನ್ನೊಬ್ಬರು ಬೇಕು ಅನ್ನುವ ಕಾರಣಕ್ಕೆ ತಂದೆ ಇನ್ನೊಂದು ಮದುವೆಯಾದರು. ಅದು ಅಂದುಕೊಂಡದ್ದು ಮಾತ್ರ. ಆದರೆ ಅಂದಿನಿಂದ ತಾಯಿಯಾಗಬೇಕಿದ್ದ ಚಿಕ್ಕಮ್ಮ ಮಲತಾಯಿಯಾಗಿ ದಿನವೂ ನೋವು ಕೊಡುವುದಕ್ಕೆ ಆರಂಭ ಮಾಡಿದರು. ಸರಿಯಾದ ಊಟವಿಲ್ಲ ನಿದ್ದೆ ಇಲ್ಲ ಪ್ರೀತಿಯಂತೂ ಇಲ್ಲವೇ ಇಲ್ಲ. ತಂದೆ ಹೊಸ  ಹೆಂಡತಿ ಬಂದ ಕಾರಣ ಮಗಳನ್ನೇ ಮರೆತು ಬಿಟ್ಟರು. ಹಾಗೆ ನೋವಲ್ಲಿದ್ದವಳಿಗೆ ಆರೈಕೆ ಮಾಡುವವರು ಪ್ರೀತಿ ತೋರಿಸುವವರ ಅವಶ್ಯಕತೆ ಇತ್ತು. ಹಾಗಾಗಿ ಆತನ ಪರಿಚಯ ಆಯ್ತು. ಆತನ ಮಾತು, ನಡೆ-ನುಡಿ ಆತ ಜೊತೆಗೆ ನಿಂತು ಧೈರ್ಯ ತುಂಬುವ ವಿಚಾರ ಎಲ್ಲವೂ ಅವಳನ್ನು ಆತನೆಡೆಗೆ ಸೆಳೆಯಿತು. ಆತನ ಜೊತೆಗೆ ಹೆಚ್ಚು ಸಮಯ ಕಳೆಯುವ ಮನಸಾಯ್ತು. ಹಾಗಾಗಿ ಆಕೆ ಅವನನ್ನು ಇಷ್ಟಪಟ್ಟಳು. ಆದರೆ ಇದೇ ಸ್ಥಿತಿಗತಿ ಮುಂದುವರೆಯುತ್ತೋ ಗೊತ್ತಿಲ್ಲ. ಆಕೆಗೆ ಸಧ್ಯಕ್ಕೆ ಬೇಕಾಗಿರೋದು ಒಂದಷ್ಟು ಪ್ರೀತಿ ತೋರಿಸುವವರು. ಈ ಪ್ರೀತಿಯನ್ನು ಬಯಸುವುದರಲ್ಲಿ ತಪ್ಪೇನಿದೆ ಅಲ್ವಾ?. ನಾನು ಮೌನವಾಗಿ ಬಿಟ್ಟೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ