ಸ್ಟೇಟಸ್ ಕತೆಗಳು (ಭಾಗ ೭೭೪) - ಅರ್ಜಿ
ಹೋರಾಟಗಳು ಇನ್ನೊಂದಷ್ಟು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿವೆ. ಜನ ಹೆಚ್ಚು ಹೆಚ್ಚು ಸೇರುತ್ತಿದ್ದಾರೆ. ಅವರ ಧರ್ಮದ ಬಗ್ಗೆ ಯಾರೋ ಕೆಟ್ಟ ಮಾತನ್ನಾಡಿದರು ಅವರನ್ನು ಬಂಧಿಸಬೇಕು ಅನ್ನುವ ಕಾರಣಕ್ಕೆ ಈ ಹೋರಾಟ ಆರಂಭವಾದದ್ದು. ಆ ಹೋರಾಟದ ತೀವ್ರವಾದ ನಶೆಯಲ್ಲಿ ಆಗಿರುವ ಹಾನಿಗಳನ್ನು ಲೆಕ್ಕ ಹಾಕಿದ್ರೆ ಕಟ್ಟಿರುವ ತೆರಿಗೆ ಹಣವೇ ಹೆಚ್ಚು ಅಲ್ಲಿಯೇ ಪೋಲಾಗ್ತಾಯಿದೆ. ಒಂದಷ್ಟು ಸಾವುಗಳಾದವು ಅಲ್ಲಲ್ಲಿ ಬೆಂಕಿ ಬಿದ್ದು ಕೆಲವೊಂದು ಮನೆಗಳು ಸುಟ್ಟು ಕರಕಲಾದವು. ತಪ್ಪು ಮಾಡದವರು ಶಿಕ್ಷೆಯನ್ನು ಅನುಭವಿಸ್ತಾ ಹೋದರು. ಅವರಿಗೆ ಅವರ ಧರ್ಮದ ಬಗ್ಗೆ ಯಾರೂ ಏನೂ ಮಾತನಾಡುವ ಹಾಗಿಲ್ಲ ಹೇಳುವ ಹಾಗಿಲ್ಲ ಅದುವೇ ಜಗತ್ತಿನ ಅಂತಿಮ ಸತ್ಯ. ಹೀಗೆ ಹೋರಾಟ ಮಾಡಿ ಬಂದವರೆಲ್ಲ ಅದ್ಬುತವಾದ ಸಾಧನೆಯನ್ನೇ ಮಾಡಿದ್ದೇವೆ ಅಂದುಕೊಂಡು ಅವರವರ ಮನೆ ಕಡೆಗೆ ನಡೆದು ಬಿಟ್ರು. ಆದರೆ ಅವರದೇ ಊರಿನಲ್ಲಿ ಅವರದೇ ಧರ್ಮಕ್ಕೆ ಸೇರಿದ ಕೆಲವೊಂದು ಮನೆಯವರಿಗೆ ಪ್ರತಿ ದಿನದ ಬದುಕಿಗೆ ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ, ಆಸ್ಪತ್ರೆಗಳಲ್ಲಿ ದುಡ್ಡು ಕಟ್ಟೋಕಾಗದೆ ಪರದಾಡ್ತಾ ಇದ್ದಾರೆ. ಉನ್ನತ ಶಿಕ್ಷಣಕ್ಕಾಗಿ ಹಣದ ಕೊರತೆಯಿಂದ ಎಲ್ಲೋ ಒಂದು ಕಡೆ ಕೂಲಿ ಮಾಡುತ್ತಿದ್ದಾರೆ ಅಗತ್ಯ ವಸ್ತುಗಳನ್ನ ಖರೀದಿಸಲಾಗದೆ ಕನಸುಗಳನ್ನು ಬಲಿಕೊಡುತ್ತಿದ್ದಾರೆ. ಯಾರಿಗೂ ಇದು ಕಾಣಲೇ ಇಲ್ಲ. ಸದ್ಯಕ್ಕೆ ಬೇಕಾಗಿದ್ದಾರೆ... ಧರ್ಮ ಎಂದರೆ ಬದುಕಿನ ರೀತಿ. ಇನ್ನೊಬ್ಬರಿಗೆ ತೊಂದರೆ ಮಾಡದೆ ಜೀವನ ಸಾಗಿಸುವ ಪರಿಯನ್ನ ಅರ್ಥೈಸಿ ವಿವರಿಸುವ ಜನ ಬೇಕಾಗಿದ್ದಾರೆ. ಧರ್ಮ ಎಂದರೇನು ಅನ್ನೋದನ್ನ ಸರಿಯಾಗಿ ವಿವರಿಸಿ ದಾರಿಗೆ ಬೆಳಕು ತೋರಿಸುವವರು ಬೇಕಾಗಿದ್ದಾರೆ... ಹೀಗೊಂದು ಜಾಹಿರಾತು ಪತ್ರಿಕೆಗಳಲ್ಲಿ ಓಡಾಡುತ್ತಿತ್ತು. ಅರ್ಹರು ಅರ್ಜಿ ಸಲ್ಲಿಸಬಹುದು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ