ಸ್ಟೇಟಸ್ ಕತೆಗಳು (ಭಾಗ ೭೭೬) - ಅವಳು

ಸ್ಟೇಟಸ್ ಕತೆಗಳು (ಭಾಗ ೭೭೬) - ಅವಳು

ಅವಳನ್ನ ಅರ್ಥೈಸಿಕೊಳ್ಳೋರು ಜೊತೆಗಿರಬೇಕಲ್ವಾ? ಮನೆಗೆ ಯಾರಾದರೂ ಬಂದರೆ ಅತಿಥಿಗಳಿಗೆ ತಕ್ಷಣದಲ್ಲಿ ಕುಡಿಯುವುದಕ್ಕೆ ತಿನ್ನೋದಕ್ಕೆ ವ್ಯವಸ್ಥೆ ಮಾಡಿಕೊಡಬೇಕಾದವಳು ಅವಳು, ಎಲ್ಲರ ಊಟವಾದ ಮೇಲೆ ಆ ಪಾತ್ರೆಗಳನ್ನು ತೊಳೆದು ಅಡಿಗೆ ಮನೆಯನ್ನ ಸ್ವಚ್ಛಗೊಳಿಸಬೇಕಾದವಳು ಅವಳು, ಕಸ ಗುಡಿಸಿ ನೆಲ ಒರೆಸಿ ಮನೆಯನ್ನ ಶುಭ್ರವಾಗಿ ಇಡಬೇಕಾದವಳು ಅವಳು, ಅವನೇನಾದರೂ ಸುಸ್ತಾಗಿ ಮನೆಗೆ ಬಂದಾಗ ತಕ್ಷಣದಲ್ಲಿ ನೀರು ತಂದುಕೊಟ್ಟು ಆತನ ಸುಸ್ತನ್ನು ನಿವಾರಿಸಬೇಕಾದವಳು ಅವಳು, ಅವಳು ಸುಸ್ತಾಗಿ ಬಂದಾಗ ಅವಳೇ ನೀರು ತೆಗೆದುಕೊಂಡು ಕುಡಿಯಬೇಕಂತೆ. ನಿರ್ಧಾರ  ಎನ್ನುವುದೇನಾದರೂ ಬಂದಾಗ ಆಕೆ ಒಂದಷ್ಟು ಜನರ ಒಪ್ಪಿಗೆಯನ್ನು ಕೇಳಬೇಕಂತೆ, ಎಲ್ಲರ ಬಟ್ಟೆಗಳನ್ನ ಶುಭ್ರವಾಗಿ ಒಗೆದು ಬಿಸಿಲಿಗೆ ಹಾಕಿ ಮತ್ತೆ ಮಡಚಿಟ್ಟು ಚಾಪೆ ದಿಂಬುಗಳನ್ನ ಸರಿಪಡಿಸಿ ಕಿಟಕಿ ಗಾಜುಗಳನ್ನ ಒರೆಸಿ ಹೊಟ್ಟೆಗೆ ಬೇಕಾದ್ದನ್ನ ತಯಾರಿ ಮಾಡಬೇಕಾದವಳು ಅವಳು. ಒಂದಷ್ಟು ಸಮಯ ಅವಳು ಮಾಡುವ ಕೆಲಸವನ್ನ ಅವನು ಮಾಡೋದಕ್ಕೆ ಪ್ರಾರಂಭವಾದರೆ ಅವಳಿಗೂ ಒಂದಷ್ಟು ನೆಮ್ಮದಿ ಒಂದಷ್ಟು ಸಾಂತ್ವಾನವಾದರೂ ಸಿಕ್ಕಿತು. ಬೆಳೆಯುವ ಯೋಚನೆಯಲ್ಲಿ ಅವಳು ಅವನು ಅನ್ನೋ ಎರಡು ವಿಭಾಗವನ್ನ ದೊಡ್ಡ ಕಂದಕವಾಗಿಸಿ ಒಂದನ್ನು ಏರಿಸಿಯೋ ಇನ್ನೊಂದನ್ನು ಇಳಿಸಿಯೋ ಇಡುವ ನಾವು ಎರಡನ್ನು ಸಮಾನವಾಗಿ ನೋಡಿದರೆ ದೊಡ್ಡ ಸಾಧನೆಗಳು ಕಣ್ಣ ಮುಂದೆ ನಿಲ್ಲಬಹುದು. ಹೀಗೆಂದು ನನ್ನ ಕೈ ಹಿಡಿದು ಅವಳ ಕಣ್ಣಾಲಿಗಳನ್ನ ತುಂಬಿಕೊಂಡು ಒಂದಷ್ಟು ಬದಲಾವಣೆಗಳಾದರೆ ಈ ಕಣ್ಣೀರು ಕಡಿಮೆಯಾದಿತು ಎಂದು ಹೇಳಿ ಹಾಗೆ ನಡೆದು ಬಿಟ್ಟಳು ಅವಳು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ