ಸ್ಟೇಟಸ್ ಕತೆಗಳು (ಭಾಗ ೭೭೮) - ಘಟನೆ

ಸ್ಟೇಟಸ್ ಕತೆಗಳು (ಭಾಗ ೭೭೮) - ಘಟನೆ

ಕನಸುಗಳೆಲ್ಲವೂ ಹಾಗೇ ಚಿತೆಯಲ್ಲಿ ಉರಿದು ಹೋಗುತ್ತಿತ್ತು. ವಿಪರೀತ ಕನಸುಗಳನ್ನು ಇಟ್ಟುಕೊಂಡು ಹೊಸ ಆಲೋಚನೆಯೊಂದಿಗೆ ಸ್ನೇಹಿತರನ್ನ ಒಟ್ಟು ಸೇರಿಸಿಕೊಂಡು ತನ್ನೂರಿನ ಹೆಸರನ್ನು ದೇಶದ ತುಂಬೆಲ್ಲ ಪಸರಿಸುವ ಆಸೆ ಹೊತ್ತಿದ್ದ ಹುಡುಗ. ಆಸೆಗಳನ್ನ ಪ್ರತಿಯೊಬ್ಬರೂ ಪಡುತ್ತಾರೆ. ಆದರೆ ಅದಕ್ಕಾಗಿ ಶ್ರಮ ಪಡೋರು ಕಡಿಮೆ. ಈ ಹುಡುಗ ಹಾಗಲ್ಲ ಅದಕ್ಕಾಗಿ ಆಗಲು ರಾತ್ರಿ ಎನ್ನದೆ ಪರಿಶ್ರಮ ಪಟ್ಟು ಸದೃಢ ಮನಸ್ಸಿನ ಒಳ್ಳೆಯ ಯೋಚನೆಯ ಮನಸ್ಸುಗಳನ್ನ ಜೊತೆ ಸೇರಿಸಿಕೊಂಡು ಒಂದಷ್ಟು ಸಮಾಜಮುಖೀ  ಕೆಲಸದಲ್ಲಿ ತೊಡಗಿಸಿಕೊಂಡ. ತನ್ನದೇ ಒಂದಷ್ಟು ಆಸೆಗಳನ್ನು ಇಟ್ಟುಕೊಂಡು ಬದುಕಿನ ರೀತಿಯನ್ನು ಬದಲಾಯಿಸಬೇಕು ಅಂದುಕೊಂಡ. ಆದರೆ ಕೆಲವೊಂದು ಸಲ ಭಗವಂತನ ಊರಿನಲ್ಲಿ ಅದ್ಭುತ ವ್ಯಕ್ತಿಗಳ ಅವಕಾಶ ಖಾಲಿಯಾಗಿರುತ್ತದೆ. ಕೆಟ್ಟ ಘಟನೆಯೊಂದು ಕನಸಿನ ಹುಡುಗನ ಸಾವಿಗೆ ಕಾರಣವಾಗಿತ್ತು. ಮನಸ್ಸು ಮಾತನ್ನ ಕೇಳದೆ ಇರುವಂತಹ ಕಾರ್ಯವನ್ನ ಮಾಡುವಂತಹ ಸ್ಥಿತಿಗೆ ಬಂದು ತಲುಪಿತು .ಬೀಸಿದ ಕತ್ತಿಗಳು ಅಲ್ಲಲ್ಲಿ ಚೆಲ್ಲಿದ ರಕ್ತದ ಹನಿಗಳೆಲ್ಲವೂ ಕನಸಿನ ಕಥೆಯನ್ನ ಹೇಳುತ್ತಿದ್ದವು. ಸಾವು ಅನ್ನೋದನ್ನ ನಾವು ಹುಡುಕಿಕೊಂಡು ಹೋಗಬಾರದು. ಅಲ್ಲದೆ  ಇನ್ಯಾರದೋ ಕನಸಿನ ಗೋಪುರಗಳನ್ನು ಕಡಿದು ಹಾಕಿ ಜೀವನಪೂರ್ತಿ ನರಳುವಂತೆಯೂ ಮಾಡಬಾರದು. ತಪ್ಪು ನಾವು ಬೆಳೆದು ಬಂದ ರೀತಿಯೋ, ನಮ್ಮ ವಿವೇಚನೆಯನ್ನ ಹಿಡಿತಿದ್ದಲ್ಲಿಟ್ಟುಕೊಳ್ಳುವ ಗತಿಯಿಂದಾಗಿ ಸಂಭವಿಸಿಬಿಡುತ್ತದೆ. ಮತ್ತೆ ಕತ್ತಲೆಯ ಕೋಣೆಯೊಳಗೆ ನರಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಲ್ಲೊಂದು ಮನೆಯೊಳಗೆ ಮೌನ ತುಂಬಿದೆ, ಚಿತೆ ಉರಿಯುತ್ತಿದೆ, ಕನಸುಗಳೆಲ್ಲವೂ ಮೂಲೆಗೊರಗಿ ನಿಂತಿದೆ. ಅಯ್ಯೋ ಹೀಗಾಯಿತಲ್ಲಾ ಎಂದು ಪಶ್ಚಾತಾಪ ಪಡುವುದನ್ನು ಬಿಟ್ಟು ಮತ್ತೇನು ಮಾಡದ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ