ಸ್ಟೇಟಸ್ ಕತೆಗಳು (ಭಾಗ ೭೭೯) - ಸಾವು
ಸಾವಿಗೆ ಬೇಸರವಾಗಿದೆ. ಅದು ತನ್ನ ಕೆಲಸವನ್ನು ಸಾಮಾನ್ಯವಾಗಿ ನಿರ್ವಹಿಸುತ್ತಾನೇ ಇದೆ. ಆದರೆ ಎಲ್ಲಾ ಸಾವುಗಳು ಒಂದೇ ತೆರನಾಗಿ ಕಾಣುತ್ತಿಲ್ಲ. ಕೆಲವೊಂದು ಸಾವುಗಳ ಹಿಂದೆ ಸಾವಿರಾರು ಜನರ ಮೆರವಣಿಗೆ ನಡೆದಿರುತ್ತದೆ. ಕೆಲವೊಂದು ಕಡೆ ಹೆಗಲು ಕೊಡುವುದಕ್ಕೆ ಹೆಗಲುಗಳೇ ಇಲ್ಲವಾಗಿರುತ್ತವೆ. ಕಣ್ಣೀರು ಇಳಿಸುವವರು ಕೆಲವು ಕಡೆ, ಹಾಗೆ ಮೂಲೆಗೆ ಸರಿಸಿ ನಡೆಯುವುದು ಒಂದು ಕಡೆ, ಯಾರದೋ ತಪ್ಪಿಗೆ ಪ್ರಾಣವನ್ನು ಒಯ್ಯಬೇಕಾದ ಸ್ಥಿತಿಯು ನಿರ್ಮಾಣವಾಗುತ್ತದೆ. ತಪ್ಪು ಮಾಡಿದವರು ಹಾಗೆ ಬದುಕುವಂತಹ ಘಟನೆಯು ಕಣ್ಣ ಮುಂದಿದೆ. ಸಾವಿಗೆ ಬೇಸರವಾಗಿದೆ. ಹಾಗೆ ಸಾವು ಯಾರ ಹತ್ತಿರವೂ ಹುಡುಕಿಕೊಂಡು ಬರುವುದಿಲ್ಲ. ಯಾರದು ಹುಚ್ಚಾಟಕ್ಕೆ ಅಮಲಿನ ನಶೆಗೆ, ಇನ್ಯಾರದ್ದೋ ಪ್ರಾಣವನ್ನು ಒಯ್ಯಬೇಕಾದ ಸ್ಥಿತಿ ನಿರ್ಮಾಣವಾದಾಗ ಕನಿಕರವಾಗುತ್ತದೆ. ಕೆಲವೊಂದು ಸಲ ಸಾವನ್ನು ತಮಗೆ ಬೇಕಾದಂತೆ ಮಾರಾಟಕ್ಕೆ ಬಳಸಿಕೊಳ್ಳುವವರನ್ನು ಕಂಡು ಸಾವಿಗೆ ಬೇಸರವಾಗುತ್ತದೆ. ಸಾವಿನಿಂದ ನಾಯಕರಾಗುತ್ತಾರೆ, ಸಾವಿನಿಂದ ಅಧಿಕಾರದ ಗದ್ದುಗೆ ಏರುತ್ತಾರೆ. ಸಾವಿನಿಂದ ಹಲವು ಜನರ ನಡುವೆ ಗುರುತಿಸಿಕೊಳ್ಳುತ್ತಾರೆ. ಸಾವಿನಿಂದ ದೊಡ್ದ ಬಂಗಲೆಗಳನ್ನು ಕಟ್ಟಿಕೊಂಡು ಮೆರೆಯುತ್ತಾರೆ. ಅದು ಕೆಲವು ಸಾವುಗಳಿಂದ ಮಾತ್ರ. ಕೆಲವೊಂದು ಸಾವುಗಳು ಉಪಯೋಗವಿಲ್ಲದೆ ಹಾಗೆ ಬದಿಗೆ ಸರಿದುಬಿಡುತ್ತದೆ. ಇದನ್ನು ಕಂಡು ಸಾವಿಗೂ ಬೇಸರವಾಗುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ