ಸ್ಟೇಟಸ್ ಕತೆಗಳು (ಭಾಗ ೭೮೦) - ಕಾಯುವಿಕೆ

ಸ್ಟೇಟಸ್ ಕತೆಗಳು (ಭಾಗ ೭೮೦) - ಕಾಯುವಿಕೆ

ಎಷ್ಟು ಸಮಯದಿಂದ ಅಂತ ಕಾಯುವುದು, ಯಾರಿಗೂ ಕೂಡ ನನ್ನ ಬೆಲೆ ಅರ್ಥಾನೇ ಆಗ್ತಾ ಇಲ್ಲ. ನನ್ನನ್ನ ಸರಿಯಾದ ರೀತಿಯಲ್ಲಿ ಯಾರೂ ಕೂದ ಬಳಸಿಕೊಳ್ಳುತ್ತಿಲ್ಲ. ಹಾಗೆ ಕೆಲಸಗಳು ಆಗ್ತಾ ಇದ್ದಾವೆ ಹೊರತು ನಾನು ಇನ್ನೊಂದಷ್ಟು ಹೊಸ ಕೆಲಸಗಳನ್ನು ಮಾಡಬಹುದು. ನನ್ನ ಮೂಲ ಸ್ವರೂಪ ಏನು ಅನ್ನೋದನ್ನ ಯಾರೂ ಅರ್ಥ ಮಾಡಿಕೊಳ್ಳುತ್ತಾನೇ ಇಲ್ಲ. ಹೀಗೆ ಉಳಿದುಬಿಟ್ಟರೆ ನನ್ನ ಜೀವನ ಏನು ಅನ್ನೋ ಪ್ರಶೆಯನ್ನ ಆವತ್ತು ನಮ್ಮ ಪರಿಚಯದ ಒಬ್ಬರ ಬಳಿ ಕೇಳಿದೆ. ಆಗ ಅವರು ನನಗೆ ವಿವರಿಸುವುದಕ್ಕೆ ಕೊಟ್ಟ ಉದಾಹರಣೆ ಹೇಗಿತ್ತು ಅಂದ್ರೆ, ರಸ್ತೆ ಬದಿಯಲ್ಲಿ ಮತ್ತು ಎರಡು ರಸ್ತೆಗಳನ್ನು ವಿಭಾಗಿಸುವಲ್ಲಿ ಒಂದಷ್ಟು ಗಿಡಗಳನ್ನು ನೆಟ್ಟಿರುತ್ತಾರೆ. ಜೊತೆಗೆ ಹಳದಿ ಬಣ್ಣದಲ್ಲಿ ಒಂದಷ್ಟು ಫಲಕಗಳನ್ನು ಸಾಲಾಗಿ ನೆಟ್ಟಿರುತ್ತಾರೆ. ಅವು ಬೆಳಕಿನ ಹೊತ್ತಲ್ಲಿ ಅದ್ಯಾಕೆ ಅಲ್ಲಿ ಇದ್ದಾವೆ ಅನ್ನೋದು ಕೂಡಾ ಅರ್ಥವಾಗುವುದಿಲ್ಲ. ಆದರೆ ರಾತ್ರಿ ಸಮಯಕ್ಕಾಗುವಾಗ ಅವೆಲ್ಲವೂ ಕೂಡ ಬೆಳಕಿನ ಪ್ರತಿಫಲನ ಹೊಂದಿ ಜನರಿಗೆ ಅಪಘಾತವಾಗುವುದನ್ನು ತಡೆಯುತ್ತದೆ ಮತ್ತು ರಸ್ತೆಯ ಉದ್ದ ಅಗಲಗಳನ್ನು ನಿರ್ಧರಿಸುತ್ತದೆ. ಅದರಿಂದ ಚೆನ್ನಾಗಿ ಚಲಿಸುವುದನ್ನೂ ಸಾಧ್ಯವಾಗುತ್ತದೆ. ಹಾಗೆಯೇ ಜೀವನವು ಕೂಡ ನಮ್ಮ ಉಪಯೋಗ ಕೆಲವೊಂದು ಕ್ಷಣದಲ್ಲಿ ಗೊತ್ತಾಗುವುದಿಲ್ಲ. ಕತ್ತಲೆಯಲ್ಲಿ ಆ ಫಲಕಗಳು ಉಪಯೋಗ ಹೇಗೆ ಮುಖ್ಯವೋ ನಾವು ಕೆಲವೊಂದು ಮುಖ್ಯ ಕಾರ್ಯಕ್ಕೆ ಬಳಕೆಯಾಗುತ್ತವೆ ಅದಕ್ಕೆ ಸಮಯ ಕೂಡಿ ಬರಬೇಕು. ಕೆಲಸಗಳನ್ನ ಮಾಡ್ತಾ ಹೋದ ಹಾಗೆ ಸರಿಯಾದ ಕಾಲ ಮತ್ತು ಘಟನೆಗಳು ಜೊತೆಯಾಗುತ್ತವೆ.. ಅಂದಿನಿಂದ ಅಂತಹ ಕಾಲಕ್ಕೆ ಕಾಯ್ತಾ ಇದ್ದೇನೆ. ಅರ್ಥೈಸಿಕೊಂಡು ಮೌಲ್ಯ ಹೆಚ್ಚಾಗುವ ದಿನಕ್ಕಾಗಿ... 

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ