ಸ್ಟೇಟಸ್ ಕತೆಗಳು (ಭಾಗ ೭೮೧) - ನೋವು

ಸ್ಟೇಟಸ್ ಕತೆಗಳು (ಭಾಗ ೭೮೧) - ನೋವು

ಮೂಕವಾಗಿದೆ ಮನಸುಗಳು, ಕೈಕಾಲುಗಳು, ಮಾತು ಬಾರದೆ, ಕಿವಿಯು ಕೇಳದೆ ಹಾಗೆಯೇ ದಾಟಿ ಹೋಗುತ್ತಿವೆ ವಿದ್ಯಾವಂತ ದೇಹಗಳು. ಗಾಡಿಯ ವೇಗದ ಅರಿವಿಲ್ಲದೆ ಪುಟ್ಟ ನಾಯಿ ಮರಿಯೊಂದು ರಸ್ತೆ ದಾಟುತ್ತಿತ್ತು. ಪ್ರತಿದಿನವೂ ರಸ್ತೆ ದಾಟುವಾಗ ಒಂದು ದಿನವೂ ತೊಂದರೆ ಆಗಿರಲಿಲ್ಲ, ಆದರೆ ಆ ದಿನ ವೇಗವಾಗಿ ಬಂದ ಗಾಡಿ ಅದರ ದೇಹದ ಮೇಲೆ ಹಾದು ಹೋಗಿ ಮತ್ತೆ ಏಳಲಾಗದ ಸ್ಥಿತಿಗೆ ಬಂದು ನರಳುವುದಕ್ಕೆ ಆರಂಭ ಮಾಡಿತು.

ನೋವಿನ ಕೂಗು ಎಲ್ಲರಿಗೂ ಕೇಳಿಸುತ್ತಿದೆ ತುಂಬಾ ದೂರದವರೆಗೆ ಆದರೆ ಪ್ರತಿಯೊಬ್ಬರು ಅವರ ಕೆಲಸದಲ್ಲಿಯೇ ತಲ್ಲಿನರಾಗಿದ್ದಾರೆ. ಅದರ ಬದುಕಿನ ಬಗ್ಗೆ ಯಾರಿಗೂ ಯೋಚನೆ ಇಲ್ಲ. ಅದು ಕೇಳುತ್ತಿದೆ ಕೂಗುತ್ತಿದೆ ಮತ್ತೆ ಬೇಡಿಕೊಳ್ಳುತ್ತಿದೆ. ಕಲಿತವರಿಗೆ ಅದರ ಭಾಷೆ ಅರ್ಥವಾಗ್ತಾ ಇಲ್ಲ. ಆ ಮರಿಗೆ ಅರ್ಥವಾಗ್ತಾ ಇಲ್ಲ ಇವರೆಲ್ಲಾ ಪಠ್ಯ ಪುಸ್ತಕ ಹಿಡಿದು ಒಂದಷ್ಟೂ ಹಣ ನೀಡಿ ದೊಡ್ಡ ಕಟ್ಟಡದೊಳಗೆ ಕಲಿಯುವುದೇನು ನೋವಿಗೆ ಸ್ಪಂದಿಸುವ ಮನಸ್ಸು ಇವರೆಲ್ಲಿ ಕಲಿಯುತ್ತಾರೆ... ನರಳುವಿಕೆ  ಹೆಚ್ಚಾಗ್ತಾ ಇದೆ ಕೂಗು ಪ್ರತಿಧ್ವನಿಸುತ್ತಿದೆ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ