ಸ್ಟೇಟಸ್ ಕತೆಗಳು (ಭಾಗ ೭೮೩) - ಹಬ್ಬ

ಸ್ಟೇಟಸ್ ಕತೆಗಳು (ಭಾಗ ೭೮೩) - ಹಬ್ಬ

ಕೆಲವೇ ವರ್ಷಗಳ ಹಿಂದೆ ಹೀಗಿರಲಿಲ್ಲ. ಮನೆಯಲ್ಲಿ ಹಣತೆಗಳನ್ನ ಹಚ್ಚೋದೇನು, ಹಲವಾರು ಬಗೆಯ ಪಟಾಕಿಗಳನ್ನ ತಂದು ಅಂಗಳದ ತುಂಬೆಲ್ಲ ಸಿಡಿಸಿ ಮನೆಯನ್ನ ಬೆಳಗುವುದೇನು, ಆ ಸಂಭ್ರಮದಲ್ಲಿ ಮನೆಯವರೆಲ್ಲರೂ ಜೊತೆಗೆ ಕುಣಿದಾಡಿ ಹಲವಾರು  ವಿಚಾರಗಳನ್ನ ಹಂಚಿಕೊಳ್ಳುವುದೇನು, ಎಲ್ಲವೂ ಕೂಡ ಕನಸಾಗಿ ಕಾಡುತ್ತಿದೆ ಈಗ. ಅವನೀಗ ದೂರದ ಊರಲ್ಲಿ ಒಬ್ಬಂಟಿ, ಮತ್ತೆ ಮನೆಗೆ ತೆರಳೋಣವೆಂದರೆ ಕಿಸಿಯಲ್ಲಿದ್ದ ದುಡ್ಡು ಖಾಲಿಯಾಗುತ್ತದೆ‌. ಇನ್ನೂ ತಿಂಗಳು ಪೂರ್ತಿಯಾಗುವುದಕ್ಕೆ ತುಂಬಾ ದಿನ ಇದೆ .ಮನೆಯವರ ಕನಸಿಗೆ ನೀರೆರೇಯೊಣವೆಂದರೆ ಸಂಬಳ ಸಾಕಾಗುತ್ತಿಲ್ಲ. ಪಟಾಕಿ ಆಗಲಿ ಸಿಹಿತಿಂಡಿಯಾಗಲಿ ಯಾವುದಕ್ಕಾದರೂ ಖರ್ಚು ಮಾಡುವುದಕ್ಕೆ ಮನಸ್ಸು ಒಪ್ಪುತ್ತಿಲ್ಲ. ಉಳಿದ ಚೂರನ್ನಾದರೂ ಮನೆಗೆ ಕಳುಹಿಸಬಹುದಲ್ಲ ಎನ್ನುವ ಯೋಚನೆ .ಈಗ ಸಂಭ್ರಮವನ್ನು ದೂರದಿಂದ ಕಣ್ತುಂಬ ನೋಡಿಕೊಳ್ಳುವುದಷ್ಟೇ ಆಸೆಯಾಗಿದೆ. ಯಾವುದನ್ನೂ ಮನಃಸ್ಪೂರ್ತಿಯಾಗಿ ಮಾಡಲಾಗುತ್ತಿಲ್ಲ .ಜವಾಬ್ದಾರಿ ತುಂಬಾ ಕಷ್ಟ ಎನ್ನುವುದು ಅರ್ಥವಾಗಿದೆ. ಅಂದು ಹಬ್ಬದಲ್ಲಿ ಅಪ್ಪನ ಬಳಿ ಕೇಳಿದ್ದನ್ನೆಲ್ಲ ಕೊಡಿಸುವಾಗ ಅಪ್ಪ ಮೂರು ನಾಲ್ಕು ಬಾರಿ ಯಾಕೆ ಯಾಕೆ ಎನ್ನುವುದನ್ನು ಕೇಳುತ್ತಾ ಇದ್ದದ್ದು ಯಾಕೆ ಅನ್ನೋದು ಈಗ ಅರ್ಥವಾಗುತ್ತಿದೆ. ಹಬ್ಬ ಬದುಕಿನ ತುಂಬ ಪಾಠಗಳನ್ನ ಕಲಿಸುತ್ತಿದೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ