ಸ್ಟೇಟಸ್ ಕತೆಗಳು (ಭಾಗ ೭೮೪) - ಕತೆ

ಸ್ಟೇಟಸ್ ಕತೆಗಳು (ಭಾಗ ೭೮೪) - ಕತೆ

ಹಾಗೆಯೇ ಕಾಡಿನಲ್ಲಿ ತುಂಬಾ ದೂರದವರೆಗೆ ನಡೆಯುತ್ತಿದ್ದೆ. ನನಗೆ ನದಿಯೊಂದರ ಮೂಲಸ್ಥಾನ ಹುಡುಕಬೇಕಿತ್ತು. ಹಾಗೆ ಸತತ ಪರಿಶ್ರಮದ ನಂತರ ಒಂದಷ್ಟು ತೊರೆಗಳು ಹುಟ್ಟುವ ಜಾಗವನ್ನು ಕಂಡುಹಿಡಿದೆ. ಈ ವಿಷಯ ನಿಮ್ಮ ಜೊತೆ ಯಾಕೆ ಅಂತ ಅಂದ್ರೆ ನದಿ ಹುಟ್ಟುವ ಜಾಗವನ್ನಾದರೂ ಕಷ್ಟಪಟ್ಟು ಕಂಡು ಹಿಡಿಯಬಹುದು, ಆದರೆ ಈ ಕಥೆಗಳು ಹುಟ್ಟುತ್ತವಲ್ಲ, ಒಂದಷ್ಟು ಬದುಕುಗಳಲ್ಲಿ ಅಲ್ಲಲ್ಲಿ ಬಂದು ಹೋಗುವ ಕಥೆಗಳನ್ನು ಅದರ ಮೂಲವನ್ನು ಹುಡುಕುವುದು ಹೇಗೆ? ಅದು ತನ್ನ ಪರಿದಿಯನ್ನು ಕ್ಷಣದಲ್ಲಿ ದಾಟಿ  ಮುಂದೆ ದಾಟಿಬಿಡುತ್ತದೆ. ಸಾಹಿತ್ಯದಲ್ಲಿ ಬರುವ ಕತೆಯಲ್ಲ ಇದು, ವ್ಯಕ್ತಿಗಳ ಜೀವನವನ್ನೇ ಅದಲು ಬದಲು ಮಾಡುವ ಕಥೆಗಳು ಹಲವು ಹುಟ್ಟಿಕೊಳ್ಳುತ್ತಾನೆ ಇರುತ್ತಿದೆ. ಸಿಟ್ಟು ದ್ವೇಷ ಅನುಕಂಪ ಎಲ್ಲದಕ್ಕೂ ಕೂಡ ಒಂದೊಂದು ಕಥೆಗಳು ಒಂದೊಂದು ರೂಪದಲ್ಲಿ  ಸೃಷ್ಟಿಯಾಗುತ್ತವೆ. ಕೇಳುವ ಕಿವಿಗಳು, ಆಡುವ ನಾಲಿಗೆಗಳು ಬದಲಾಗುತ್ತಾ ಹೋದ ಹಾಗೆ ಕಥೆಗಳು ರೂಪ ಬದಲಿಸುತ್ತವೆ. ಕತೆಯೊಳಗಿನ ಸತ್ಯಗಳು ಪರಿಚಯ ಸಿಗದ ಹಾಗೇ ರೂಪ ಬದಲಿಸಿದಂತೆ ಸತ್ಯವು ಕೂಡ ಒಂದಷ್ಟು ಅಂದ ಚಂದದ ಬಟ್ಟೆಗಳನ್ನು ಹೊತ್ತುಕೊಂಡು ರೂಪವನ್ನು ಬದಲಿಸಿಬಿಟ್ಟಿದೆ. ಸದ್ಯಕ್ಕೆ ಸತ್ಯದ ಹತ್ತಿರದ ಕಥೆಯನ್ನು ಹುಡುಕುವುದೇ ಒಳ್ಳೆಯದು. ಸತ್ಯವನ್ನು ಹುಡುಕಿದರೂ ಸಿಗದಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ನಿಮಗೆ ಸಿಕ್ಕಿರೋದು ಕಥೆಯೋ ಸತ್ಯವೋ ಅರ್ಥವಾಗದ ಸ್ಥಿತಿಗೆ ತಲುಪಿಬಿಟ್ಟಿದ್ದೇವೆ. ಒಟ್ಟಿನಲ್ಲಿ ಕಥೆ ಬದುಕುತ್ತಾ ಇದೆ ಸತ್ಯ ಮರೆಯಾಗಿದೆ.ದಾರಿಯಲ್ಲಿ ಹಾಗೆ ಹುಡುಕುತ್ತಾ ಹೊರಟಿದ್ದೇನೆ ಕತೆಗಳು ಹುಟ್ಟುವ ಮೂಲಸ್ಥಾನವನ್ನ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ