ಸ್ಟೇಟಸ್ ಕತೆಗಳು (ಭಾಗ ೭೮೫) - ಆಸೆ

ಸ್ಟೇಟಸ್ ಕತೆಗಳು (ಭಾಗ ೭೮೫) - ಆಸೆ

ಆ ಬಟ್ಟೆಯ ಅಂಗಡಿಯಲ್ಲಿ ಆಕೆ ಹಲವು ವರ್ಷಗಳಿಂದ ಕೆಲಸವನ್ನು ನಿರ್ವಹಿಸುತ್ತಿದ್ದಾಳೆ. ಬಂದವರಿಗೆಲ್ಲರಿಗೂ ವಿಧ ವಿಧವಾದ ಬಟ್ಟೆಗಳನ್ನು ತೋರಿಸಿ ಅವರ ಇಷ್ಟದ ಬಟ್ಟೆಗಳನ್ನು ಆರಿಸುವಂತೆ ಮಾಡಿ ಅವರ ಮನವನ್ನು ಸಂಭ್ರಮ ಪಡಿಸಿದ್ದಾಳೆ. ಅವಳಿಗೂ ಆ ಬಟ್ಟೆಗಳಲ್ಲಿ ಹಲವನ್ನು ಖರೀದಿಸುವ ಆಸೆ. ಆದರೆ ತನ್ನ ಸಂಬಳದಲ್ಲಿ ಮನೆ ಸಾಗಬೇಕು ಅನ್ನುವ ಅನಿವಾರ್ಯತೆಗೋಸ್ಕರ ಆಸೆಗಳನ್ನು ಅದುಮಿಟ್ಟುಕೊಂಡು ಬದುಕು ಸಾಗಿಸಿದ್ದಾಳೆ. ಇತ್ತೀಚೆಗೆ ಹಬ್ಬದ ದಿನ ಅಲ್ಲಿಗೆ ಬಂದ ಹುಡುಗನ ಮುಖವನ್ನು ಗಮನಿಸಿದಾಗ ತನ್ನ ಮಗನ ನೆನಪಾಯಿತು. ಆತ ತನ್ನ ಅಮ್ಮನಿಗೆ ಎಂದು ಪ್ರೀತಿಯಿಂದ ಸಾರಿಯೊಂದನ್ನು ಇನ್ನಿತರ ಬಟ್ಟೆಗಳನ್ನ ಆಯ್ಕೆ ಮಾಡಿಕೊಳ್ಳಲಾರಂಬಿಸಿದ. ಆತ ಪ್ರತಿಯೊಂದು ಸಾರಿಯನ್ನ ಕೈಯಲ್ಲಿ ಹಿಡಿದು ತನ್ನಮ್ಮನಿಗೆ ಯಾವ ಸಾರಿ ಒಪ್ಪಿಗೆಯಾಗಬಹುದು ಎನ್ನುವುದನ್ನು ಮನಸ್ಸಿನಲ್ಲಿ ಯೋಚಿಸುತ್ತಾ ಯೋಚಿಸುತ್ತಾ ಕೊನೆಗೆ ಅಂದದ ಸಾರಿ ಒಂದನ್ನು ಖರೀದಿಸಿ ಬಿಟ್ಟ. ಅದನ್ನು ಹಿಡಿದು ಅಲ್ಲಿಂದ ಹೊರಟಾಗ ಆಕೆಗೆ ತನ್ನ ಮಗ ಕುಡಿತ, ಜೂಜು ಅಬ್ಬುತ್ತಾ ಕಾಲಹರಣ ಮಾಡಿ ಸರಿಯಾಗಿ ಶಾಲೆಗೆ ಹೋಗದೆ ಇದ್ದ ಕೆಲಸವನ್ನೂ ಮಾಡದೆ ಊರ ಪೋಲಿಯಾಗಿ ತಿರುಗಾಡುತ್ತಿರುವುದನ್ನು ಕಂಡು ಕಣ್ಣಂಚಿನಲ್ಲಿ ಹನಿ ನೀರು ಜಾರಿತು. ಯಾರದೋ ಮಕ್ಕಳೆಲ್ಲರೂ ತಮ್ಮ ತಾಯಿಗೆ ಪ್ರೀತಿಯ ಬಟ್ಟೆ ಖರೀದಿಸುವಾಗ ತನ್ನ ಮಗ ಅಮ್ಮ ಊಟವಾಯಿತಾ ಎಂದು ಕೇಳುವಷ್ಟು ಸೌಜನ್ಯವನ್ನು ಇಟ್ಟುಕೊಳ್ಳದಿರುವುದನ್ನು ಕಂಡು ಆಕೆಗೆ ನೋವಾಯಿತು. ಆಕೆ ಕಾಯುತ್ತಿದ್ದಾಳೆ, ಒಂದಲ್ಲ ಒಂದು ದಿನ ತನ್ನ ಮಗ ಪ್ರೀತಿಯಿಂದ ಹತ್ತಿರ ಬಂದು ಮಾತನಾಡಿಸುತ್ತಾನೆ ಎಂದು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ