ಸ್ಟೇಟಸ್ ಕತೆಗಳು (ಭಾಗ ೭೮೭) - ಬದಲಾಗಿದೆ
ಮೊದಲು ನನ್ನ ಊರು ಹೀಗಿರಲಿಲ್ಲ. ಯಾರೋ ಒಬ್ಬ ತಪ್ಪು ಮಾಡಿದ್ದಾನೆ ಆತನಿಗೆ ಶಿಕ್ಷೆ ಆಗಬೇಕು ಅನ್ನೋ ಕಾರಣಕ್ಕೆ ಎಲ್ಲರೂ ಒಟ್ಟಾಗುತ್ತಿದ್ದರು. ತಪ್ಪಿತಸ್ಥನೊಬ್ಬ ಜೈಲಿಗೆ ಹೋಗಿ ಬಂದಿದ್ದಾನೆಂದರೆ ಆತನಿಗೆ ಸಮಾಜದಲ್ಲಿ ಯಾವುದೇ ರೀತಿಯ ಮೌಲ್ಯವೂ ಇರಲಿಲ್ಲ. ಆತನನ್ನ ತುಂಬಾ ತಿರಸ್ಕಾರದಿಂದ ಕಾಣುತ್ತಿದ್ದರು. ತಪ್ಪು ಮಾಡುವವರಿಗೆ ಸಮಾಜದ ಮುಂದೆ ತಲೆ ಎತ್ತಿ ಬದುಕುವ ಭಯ ಕಾಡುತ್ತಿತ್ತು. ಸಮಾಜವು ತಪ್ಪಿತಸ್ಥರನ್ನು ಕಡೆಗಣಿಸ್ತಾ ಇತ್ತು. ದ್ವೇಷದ ಚಿಂತನೆಗಳು ಎಲ್ಲೂ ಮೊಳಕೆ ಹಿಡಿದು ಬೇರು ಬಿಟ್ಟು ಬಲವಾಗಿ ನಿಲ್ಲುತ್ತಿರಲಿಲ್ಲ. ನೆಮ್ಮದಿಯ ಬದುಕು ಒಂದೇ ಎಲ್ಲರ ಜೀವನ ಮಂತ್ರವಾಗಿತ್ತು. ಆದರೆ ಈಗ ನನ್ನ ಊರು ಹಾಗಿಲ್ಲ. ತುಂಬಾ ಬದಲಾಗಿಬಿಟ್ಟಿದೆ. ಜೈಲಿನೊಳಗೆ ಹೋಗಿ ಬಂದವನನ್ನ ರಾಜ ಮರ್ಯಾದೆಯಿಂದ ಸ್ವಾಗತಿಸಿ ಆತನನ್ನ ಸಮಾಜದ ಮುಂದೆ ನಾಯಕನಂತೆ ಬಿಂಬಿಸುತ್ತಾರೆ. ಸುಳ್ಳುಗಳೇ ಹೆಚ್ಚು ವಿಜೃಂಬಿಸುತ್ತಿವೆ. ಸತ್ಯ ದಾರಿ ಬದಿಯಲ್ಲಿ ಮೂಲೆಗೊರಗಿ ಬಿಟ್ಟಿದೆ. ದ್ವೇಷ ಸಮಾಜದ ಮೂಲ ಮಂತ್ರವಾಗಿದೆ. ಮಾತೇ ಬಂಡವಾಳವಾಗಿದೆ ಅದೇ ಸಾಧನೆ ಎನಿಸುತ್ತಿದೆ. ನಿಜದ ಸಾಧಕರು ಮರೆಯಲ್ಲಿ ಉಳಿದುಬಿಟ್ಟಿದ್ದಾರೆ. ನನ್ನ ಊರನ್ನು ಬದಲಿಸುವ ಬಗೆ ಹೇಗೆ ಸ್ವಾಮಿ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ