ಸ್ಟೇಟಸ್ ಕತೆಗಳು (ಭಾಗ ೭೮೮) - ಪ್ರಶ್ನೆ

ಸ್ಟೇಟಸ್ ಕತೆಗಳು (ಭಾಗ ೭೮೮) - ಪ್ರಶ್ನೆ

ಎರಡು ಸೃಷ್ಟಿಗಳು ದೇವರದ್ದೇ, ಆದರೆ ಬದುಕಿನ ವಿಧಾನಗಳೇ ಬೇರೆ. ಅದೊಂದು ತಿರುವಿನ ಜಾಗ ಅಲ್ಲಿ ವಾಹನಗಳು ನಿಧಾನವಾಗುತ್ತವೆ. ಆಕೆ ತನ್ನ ಶಾಲೆಯ ಬ್ಯಾಗನ್ನು ಹೆಗಲಿಗೆ ಏರಿಸಿಕೊಂಡು ಸಂಭ್ರಮದಿಂದ ಹೆಜ್ಜೆ ಹಾಕುತ್ತಾಳೆ. ದಿನವೂ ಹೊಸ ಆಲೋಚನೆಗಳು ಹೊಸ ವಿಚಾರಗಳನ್ನು ಇಟ್ಟುಕೊಂಡು ಹೊಸ ಕಲಿಕೆಯ ದಾರಿಯಲ್ಲಿ ಸಾಗುತ್ತಿದ್ದಾಳೆ. ಆಕೆಗೆ ದಿನವೂ ತನ್ನದೇ ವಯಸ್ಸಿನ ನಗು ಮೊಗದ ಮುಗ್ಧ ಮುಖದ ಹುಡುಗಿ ಎದುರಾಗುತ್ತಾಳೆ. ಹಾಗೆ ಪ್ರತಿದಿನವೂ ಅಲ್ಲಿ ಒಂದೇ ಬಣ್ಣದ ಬಟ್ಟೆ ಧರಿಸಿಕೊಂಡು ತನ್ನ ದೇಹವನ್ನ ಚಿತ್ರ ವಿಚಿತ್ರವಾಗಿ ತಿರುಗಿಸುತ್ತಾ ತಲೆಯ ಮೇಲೊಂದು ಕೈ ಮೇಲೊಂದು ವಸ್ತುಗಳನ್ನ ನೇರವಾಗಿ ನಿಲ್ಲಿಸಿಕೊಂಡು ಜನರ ಸಂಭ್ರಮವನ್ನು ಹೆಚ್ಚಿಸಿ ಒಂದಷ್ಟು ಕಾಸನ್ನು ಸಂಪಾದಿಸುತ್ತಿರುತ್ತಾಳೆ. ಈಕೆ ಮನದಲ್ಲಿ ಮೂಡುತ್ತಿರುವ ಪ್ರಶ್ನೆ ಏನಂತಂದ್ರೆ ಆಕೆಯಾಕೆ ನನ್ನ ಥರ ದಿನಕ್ಕೊಂದು ಸಂಭ್ರಮದ ಬಟ್ಟೆಯನ್ನು ಧರಿಸುತ್ತಿಲ್ಲ, ಮುಖದಲ್ಲಿ ಜೀವನೋತ್ಸಾಹ ಕಾಣುತ್ತಿಲ್ಲ, ಶಾಲೆ ಬ್ಯಾಗು ಪುಸ್ತಕ ಸಮವಸ್ತ್ರ ಇದ್ಯಾವುದೋ ಅವಳ ಬಳಿ ಇಲ್ಲ, ಪ್ರತಿಯೊಬ್ಬರ ಮುಂದೆ ಕೈಯುತ್ತಿ ಬೇಡುತ್ತಿರುವುದೇ ಯಾತಕ್ಕೆ? ಅವಳ ತಂದೆ ತಾಯಿ ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲವೇ? ಇದೆ ಸಂದರ್ಭದಲ್ಲಿ ಅವಳಲ್ಲಿ ಇವಳ ಬಗ್ಗೆ ಮೂಡಿದ ಪ್ರಶ್ನೆಗಳು ಇವರಿಗೆ ನನ್ನತರ ಕಷ್ಟ ಪಡುವ ಪರಿಸ್ಥಿತಿ ಇಲ್ವಲ್ಲ ಕಾರಣವೇನು? ಅವಳಿಗೆ ಅಷ್ಟಷ್ಟು ಚಂದದ ಬಟ್ಟೆಗಳನ್ನು ಖರೀದಿಸಿ ಕೊಟ್ಟವರು ಯಾರು? ಅದ್ಯಾವ ಶಾಲೆ ಹಸಿವಿನ ಪಾಠವನ್ನು ಕಲಿಸಿಕೊಟ್ಟು ಜೀವನವನ್ನು ಇನ್ನೂ ಚೆನ್ನಾಗಿ ಇರಿಸಿಕೊಳ್ಳುವ ಹಾಗೆ ಹೇಳಿ ಕೊಟ್ಟದ್ದು ಎಲ್ಲಿ? ಅವಳ ಬಗ್ಗೆ ಇವಳಲ್ಲಿ ಇವಳ ಬಗ್ಗೆ ಅವಳಲ್ಲಿ ಪ್ರಶ್ನೆಗಳು ಸಾವಿರ ಮೂಡುತ್ತಿವೆ. ಆದರೂ ಎದುರಾದಾಗ ಸಣ್ಣ ನಗೆ ನಕ್ಕು ಅವರವರ ಕೆಲಸದ ಕಡೆಗೆ ಮುಂದುವರೆಯುತ್ತಾರೆ. ದಿನಗಳು ಬದಲಾಗಿವೆ ಅವರ ದಿನಚರಿಗಳು ಬದಲಾಗಿಲ್ಲ. ಅವರ ಪ್ರಶ್ನೆಗಳು ಅವರಲ್ಲೇ ಉಳಿದುಬಿಟ್ಟಿದೆ ...ಉತ್ತರ ಸಿಕ್ಕಾಗ ಬದುಕನ್ನು ನೋಡುವ ರೀತಿ ಬದಲಾಗಬಹುದೇನೋ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ