ಸ್ಟೇಟಸ್ ಕತೆಗಳು (ಭಾಗ ೭೮೯) - ಪಾಠ

ಸ್ಟೇಟಸ್ ಕತೆಗಳು (ಭಾಗ ೭೮೯) - ಪಾಠ

ಕಾಯೋದು ಬಿಟ್ಟು ಇದ್ದದ್ದರಲ್ಲಿ ಬದುಕುವುದನ್ನು ಕಲಿತುಕೋ ಮಗ. ತುಂಬ ಜೋರು ಮಳೆಯಲ್ಲಿ ಪಕ್ಕದಲ್ಲೊಬ್ಬರು ಬಿಸಿ ಚಹವನ್ನ ಸಣ್ಣ ತಿಂಡಿಯನ್ನ ಇಟ್ಟು ನಿನ್ನ ದೇಹದೊಳಗಿನ ಚಳಿಗೆ ಬಿಸಿಯನ್ನು ನೀಡುತ್ತಾರೆ ಎನ್ನುವ ಕಾಯುವಿಕೆಯನ್ನು ಬಿಟ್ಟುಬಿಡು ಮಗ, ಮಂಜು ಮುಸುಕಿದ ಆ ರಸ್ತೆಯಲ್ಲಿ ಖುಷಿಯಿಂದ ನಡೆಯಬೇಕು ಅದನ್ನು ವೀಡಿಯೋ ಮಾಡಿ ಅದನ್ನ ಒಂದಷ್ಟು ಜನರಿಗೆ ಹಂಚಬೇಕು ಎನ್ನುವ ಆಸೆಯನ್ನ ಬಿಟ್ಟುಬಿಡು ಮಗ, ಚಂದದ ಹುಡುಗಿ ಒಬ್ಬಳು ನೂರು ಜನ ಹುಡುಗರ ನಡುವೆಯೂ ನಮ್ಮನ್ನೇ ಗುರುತಿಸಿ ಕೈ ಹಿಡಿದು ಶುಭಾಶಯ ಕೋರುತ್ತಾಳೆ ಮಾತನಾಡುತ್ತಾಳೆ ಎನ್ನುವ ಕನಸನ್ನ ಬಿಟ್ಟು ಬಿಡು ಮಗ, ಪ್ಯಾಂಟಿನ ಕಿಸಿಯೊಳಗಿರುವ ಪರ್ಸಿನಲ್ಲಿ ಸಾವಿರದ ಒಂದಷ್ಟು ನೋಟುಗಳು ನಲಿದಾಡುತ್ತಿರುವ ಕನಸಿನ ಸಂಭ್ರಮವನ್ನು ಮರೆತು ಬಿಡು ಮಗ, ನೀ ಹೋಗುವ ದಾರಿಯಲ್ಲೆಲ್ಲಾ ನಿನ್ನನ್ನ ಕಂಡವರು ಕರೆದು ಮಾತನಾಡಿಸುತ್ತಾರೆ ಎನ್ನುವ ದೂರ ಆಲೋಚನೆಯನ್ನ ಬಿಟ್ಟು ಬಿಡು ಮಗ, ಅವಕಾಶಗಳೆಲ್ಲವೂ ಸಾಲು ಸಾಲಾಗಿ ನಿನ್ನನ್ನು ಹುಡುಕಿಕೊಂಡು ಬಂದು ದಿನಕೊಂದು ದೊಡ್ಡ ವೇದಿಕೆಯನ್ನು ನೀಡುತ್ತದೆ ಎನ್ನುವ ಭ್ರಮೆಯನ್ನ ದೂರಸರಿಸು ಮಗ, ಯಾರೋ ಓಡಿಸುವ ಕಾರು ಇನ್ಯಾರೋ ತಂದ ಬೈಕು ಅದು ನಿನ್ನದೇ ಒಂದು ದಿನ ಆಗುತ್ತದೆ ಎನ್ನುವ ದೊಡ್ಡ ಕನಸನ್ನ ಹಾಗೆಯೇ ಅದುಮಿಟ್ಟು ಬಿಡು ಮಗ, ಚಂದದ ಬಟ್ಟೆ ದಿನಕ್ಕೊಂದು ವೇಷಭೂಷಣವನ್ನ ಧರಿಸಿ ಎಲ್ಲರ ಮುಂದೆ ಹೆಮ್ಮೆಯಿಂದ ನಡೆಯುವ ದಿನಗಳನ್ನ ದೂರಸರಿಸು ಮಗ, ನಿನ್ನ ಈ ಸದ್ಯದ ಜೀವನದ ಪಟ್ಟಿಯಲ್ಲಿ ಬರದ ವಿಚಾರಗಳು. ಸದ್ಯ ಬದುಕುವ ಪರಿಸ್ಥಿತಿಯಲ್ಲಿ ಏನು ಸಾಧ್ಯವಿದೆಯೋ ಬಂದದ್ದನ್ನು ಅನುಭವಿಸುತ್ತಾ ಸಾಗುವುದನ್ನು ಬಿಟ್ಟು ಬೆಳಕಿನ ಹೊತ್ತಲ್ಲಿ ಕಣ್ಣು ಮುಚ್ಚಿ ಕಾಣುವ ಕನಸನ್ನ ತಲೆಯ ಮೇಲೆ ಹೊತ್ತು ಮೆರೆಯಬೇಡ. ಇದು ನನ್ನ ಜೊತೆಗೆ ಪ್ರತಿದಿನ ಓಡಾಡುತ್ತಿದ್ದ ರೇವಂತನ ಉಪದೇಶ. ಎಲ್ಲ ಕನಸುಗಳನ್ನು ಕಂಡಿದ್ದವನು ಅವನು ಪರಿಸ್ಥಿತಿಗಳು ಎಲ್ಲವನ್ನ ಅರ್ಥ ಮಾಡಿಸಿದ ಮೇಲೆ ಆತ ಈಗ ಬದುಕಿನ ಪಾಠ ಹೇಳುವುದಕ್ಕೆ ಆರಂಭ ಮಾಡಿದ್ದಾನೆ. ಬದುಕು ಪಾಠ ಕಲಿಸುತ್ತೆ ಅರ್ಥ ಮಾಡಿಸಿ ಮರೆಯದಂತಹ ಪಾಠವನ್ನು ಖಂಡಿತ ಕಲಿಸುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ