ಸ್ಟೇಟಸ್ ಕತೆಗಳು (ಭಾಗ ೭೯೦) - ಸುಟ್ಟಿತು

ಸ್ಟೇಟಸ್ ಕತೆಗಳು (ಭಾಗ ೭೯೦) - ಸುಟ್ಟಿತು

ನಾನು ಮತ್ತು ಅಮ್ಮ ದಿನವೂ ಚಲಿಸುತ್ತಿದ್ದ ರಸ್ತೆ .ಇವತ್ತು ಬೆಳಗ್ಗೆ ಅಮ್ಮ ತುಂಬಾ ಪ್ರೀತಿಯಿಂದ ನನ್ನನ್ನ ಅವರು ಕೆಲಸ ಮಾಡುವ ತೋಟಕ್ಕೆ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿದ್ರು. ಆ ತೋಟಕ್ಕೆ ಹಿಂದೆ ಒಂದ್ಸಲ ಹೋಗಿದ್ದೆ ಅಲ್ಲಿ ತಿನ್ನೋದಕ್ಕೆ ತುಂಬಾ ತೆರನಾದ ಹಣ್ಣುಗಳು ಸಿಗುತ್ತವೆ. ಹಾಗಾಗಿ ಇವತ್ತು ತುಂಬಾ ಖುಷಿಯಿಂದ ಹೊರಟಿದ್ದೆ.ಅಲ್ಲಿ ಹೋಗಿ ಅಮ್ಮನಿಗೆ ಒಂದಷ್ಟು ಸಹಾಯ ಕೂಡ ಮಾಡುತ್ತೇನೆ, ಅಡಿಕೆ ಹೆಕ್ಕಿ ತರ್ತೇನೆ, ತೆಂಗಿನ ಗರಿಗಳನ್ನ  ಜೋಡಿಸ್ತೇನೆ. ಆ ಮನೆಯವರು ಮದ್ಯಾಹ್ನ ಬಿಸಿ ಬಿಸಿ ಊಟ ಕೊಡ್ತಾರೆ. ಅದೆಲ್ಲಾ ಖುಷಿಯನ್ನ ಅನುಭವಿಡುವುದ್ದಕ್ಕೆ ಅಮ್ಮನ ಜೊತೆ ಕೆಲಸದ ಮನೆಗೆ ಹೊರಟಿದ್ದೆ. ಹಾಗೆ ನಡೆಯುತ್ತಿರುವಾಗ ಏನಾಯಿತೋ ಗೊತ್ತಿಲ್ಲ ಅಮ್ಮನನ್ನ ದೂರಕ್ಕೆ ಯಾರೋ ಎಸೆದಂತಾಯಿತು, ಅಮ್ಮಾ  ಎನ್ನುವಷ್ಟರಲ್ಲಿ ನನ್ನ ದೇಹವೂ ಎಗರಿತು ಮೇಲಕ್ಕೆ. ನಮ್ಮಿಬ್ಬರ ದೇಹ ಅಲ್ಲ ಅಲ್ಲೇ ಬಿದ್ದಿದೆ ಅದರಲ್ಲಿ ಯಾವ ನರಳಟವೂ ಕಾಣ್ತಾ ಇಲ್ಲ. ಜನ ಹತ್ರ ಸೇರ್ತಾ ಇದ್ದಾರೆ ಯಾರಿಗೂ ಬೈಯುತ್ತಿದ್ದಾರೆ ನಮ್ಮ ದೇಹವನ್ನು ಕೋಲಿನಿಂದ ಅತ್ತ ಕಡೆ ಇತ್ತ ಕಡೆ ತಳ್ಳುತ್ತಿದ್ದಾರೆ. ನಮ್ಮ ದೇಹ ಕಪ್ಪಾಗಿ ಬಿಟ್ಟಿದೆ. ಇನ್ನು ಮುಂದೆ ಅಮ್ಮ ಕೆಲಸ ಮಾಡುವ ಹಾಗಿಲ್ಲ ನಾನು ತೋಟಕ್ಕೆ ಹೋಗುವ ಹಾಗಿಲ್ಲ ಮತ್ತೆ ಮನೆಗೆ ತೆರಳುವ ಹಾಗಿಲ್ಲ. ಮನೆಗೆ ಕರೆದುಕೊಂಡು ಹೋಗಿ ಉದ್ದಕ್ಕೆ ಮಲಗಿಸಿ , ಬೆಂಕಿಯಲ್ಲಿ ಸುಡುತ್ತಿದ್ದಾರೆ. ಅದೇ ಸುಟ್ಟ ಅನುಭವ ಆಗ ನೆಲದಿಂದ ಮೇಲಕ್ಕೆ ಹಾರಿದಾಗ ಆಗಿತ್ತು. ನನಗೆ ಇನ್ನು ಮುಂದೆ ಶಾಲೆಗೆ ಹೋಗೋಕಾಗಲ್ಲ, ಆಟ ಆಡೋಕಾಗಲ್ಲ, ಆ ತೋಟದ ಪೇರಳೆಹಣ್ಣು ತಿನ್ನೋಕಾಗಲ್ಲ, ಅಪ್ಪ ಅಮ್ಮನ ಜೊತೆ ಅಂಗಳದಲ್ಲಿ ಆಟ ಆಡೋಕಾಗಲ್ಲ. ನಾವು ವಿದ್ಯುತ್ ತಂತಿ ಮುಟ್ಟಿದ ಕಾರಣ ಹೀಗಾದ್ದಂತೆ. ನಮ್ಮೆಲ್ಲ ಆಸೆಗಳು ಸುಟ್ಟು ಹೋದವಲ್ಲ ಈಗ ಎಲ್ಲಾ ಕಡೆ ಬೊಬ್ಬೆ ಹೊಡಿತಾರೆ, ಪ್ರತಿಭಟನೆ ಮಾಡುತ್ತಾರೆ. ಆದರೆ ನಮ್ಮ ಕನಸುಗಳು ಹಾಗೆ ಸುಟ್ಟುಹೋದವಲ್ಲ ಇದನ್ನ ಯಾರಲ್ಲಿ ಹೇಳಿಕೊಳ್ಳುವುದು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ