ಸ್ಟೇಟಸ್ ಕತೆಗಳು (ಭಾಗ ೭೯೨) - ಸಮಯ

ಸ್ಟೇಟಸ್ ಕತೆಗಳು (ಭಾಗ ೭೯೨) - ಸಮಯ

ಆ ಊರಿನಿಂದ ನಮ್ಮೂರಿನ ಕಡೆಗೆ ಬಸ್ಸಿನಲ್ಲಿ ಪಯಣ. ಜನ ತುಂಬಿತ್ತು ಪುಣ್ಯಕ್ಕೆ ನನಗೆ ಸೀಟು ಒಂದು ದೊರಕಿತ್ತು. ಕಿಟಕಿ ಬದಿಯ ಗಾಳಿಯನ್ನು ಆಸ್ವಾದಿಸುತ್ತ ಸುತ್ತ ದೃಶ್ಯಗಳನ್ನ ನೋಡುತ್ತಾ ಆರಾಮವಾಗಿ ಸಂಭ್ರಮದಿಂದ ಊರಿನ ಕಡೆಗೆ ಹೊರಟಿದ್ದೆ. ಆಗಲೇ ಬಸ್ಸು ಹತ್ತಿದವರು ಅವರು. ಅವರ ಬಲಗಾಲಿಗೆ ಏನೋ ತೊಂದರೆ. ಸರಿಯಾಗಿ ನಡೆಯಲಾಗುತ್ತಿಲ್ಲ. ನನಗಿಂತ ಮುಂದಿನ ಎರಡು ಸೀಟುಗಳ ನಂತರ ಕಂಬವನ್ನು ಹಿಡಿದು ನಿಂತಿದ್ದಾರೆ. ನನಗೆ ಅವರಿಗೆ ನಿಂತು ಸಹಾಯಮಾಡುವ ಆಸೆ. ನೇರವಾಗಿ ಅವರಲ್ಲಿ ಜೋರಾಗಿ ಕೇಳೋಣವೆ ಅಥವಾ ಅವರು ಇತ್ತಕಡೆ ತಿರುಗಿದಾಗ ಕೈ ಭಾಷೆಯಲ್ಲಿ ಅವರನ್ನ ಇಲ್ಲಿಗೆ ಕರೆದು ಕುಳಿತುಕೊಳ್ಳಲು ತಿಳಿಸೋಣವೇ? ಏನು ಮಾಡೋದು ಅಂತ ಗೊತ್ತಾಗುತ್ತಿಲ್ಲ.  ಅವರನ್ನು ಕುಳಿತುಕೊಳ್ಳಿ  ಅನ್ನೋದಕ್ಕೆ ಹಲವಾರು ಬಾರಿ ಪ್ರಯತ್ನ ಪಟ್ಟೆ. ಆದರೆ ಅವರನ್ನು ಕರೆಯಲಿಲ್ಲ. ಹಾಗೆ ತುಂಬ ದೂರ ಚಲಿಸಿದ ನಂತರ ಅವರ ಮುಂದುಗಡೆ ಕೂತಿದ್ದ ವ್ಯಕ್ತಿ ಎಂದು ಇವರನ್ನ ಕುಳ್ಳಿರಿಸಿದ್ರು ಆಗ ಅವರ ಮುಖದಲ್ಲಿ ಮೂಡಿದ ನಗು ಆ ವ್ಯಕ್ತಿಗೆ ಸದಾ ಒಳಿತನೇ ಸೂಚಿಸುವಂತಿತ್ತು. ಆ ಎಲ್ಲಾ ಭಾವ ನನ್ನ ಜೀವದ ಪಾಲಾಗುತ್ತಿತ್ತು. ಹಾಗಾಗಿ ಸಹಾಯ ಮಾಡುವ ಅದ್ಭುತವಕಾಶ ಕಳೆದುಹೋಯಿತು. ಭಗವಂತನ ಪುಣ್ಯದ ಲೆಕ್ಕದಲ್ಲಿ ನನ್ನದು ಒಂದು ಪುಟ. ಅದಕ್ಕಿಂತ ಒಂದು ದೊಡ್ಡ ಪಟ್ಟಿ ತಯಾರಾಗ್ತಾ ಇತ್ತು ಕಳೆದುಕೊಂಡ ಮೇಲೆ ಚಿಂತಿಸಿ ಮಾಡುವುದೇನು ಹಾಗಾದಾಗ ಮನಸ್ಸಿಗೆ ಅನ್ನಿಸಿದ್ದನ್ನ ನಿಜವಾದ ನೈಜವಾದದ್ದು ಮೌಲ್ಯಯುತವಾದದ್ದು ಅಂದುಕೊಂಡರೆ ಅದನ್ನು ಆ ಕ್ಷಣದಲ್ಲಿ ಮಾಡಿ ಮುಗಿಸಬೇಕು. ಸಹಾಯ ಮಾಡುತ್ತೇನೆ ಅದಕ್ಕಾಗಿ ಸಮಯಕ್ಕೆ ಕಾಯುತ್ತಿದ್ದೇನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ