ಸ್ಟೇಟಸ್ ಕತೆಗಳು (ಭಾಗ ೭೯೩) - ಸ್ವಾಗತ

ಸ್ಟೇಟಸ್ ಕತೆಗಳು (ಭಾಗ ೭೯೩) - ಸ್ವಾಗತ

ಸಾವು ಎಂ...ಬುದು ಸ್ವಲ್ಪ ಸಮಯದ ಹಿಂದಿನವರೆಗೂ ಅಪರಿಚಿತ ವ್ಯಕ್ತಿಯಾಗಿತ್ತು. ಆಗೊಮ್ಮೆ ಈಗೊಮ್ಮೆ ಬಂದು ಯಾರನ್ನಾದರೂ ಮಾತನಾಡಿಸಿ ಜೊತೆಗೆ ಕರೆದುಯುತ್ತಿತ್ತು. ಆಗ ಸಾವಿನ ಬಗ್ಗೆಯೂ ಗೌರವ ಇತ್ತು, ಸಾವಿನ ಬಗ್ಗೆ ಭಯವೂ ಇತ್ತು. ಆದರೆ ದಿನ ಕಳೆದಂತೆ ಸಾವಿಗೆ ಜನರ ಮೇಲೆ ಪ್ರೀತಿ ಹೆಚ್ಚಾಗಿದ್ಯೋ ಅಥವಾ ಜನ ಸಾವನ್ನ ಹೆಚ್ಚು ಅಪ್ಪಿಕೊಳ್ಳುವುದಕ್ಕೆ ಆರಂಭ ಮಾಡಿದ್ದರು ಗೊತ್ತಿಲ್ಲ. ಕಣ್ಣು ತೆರೆದಾಗ ಸಾವುಗಳ ರಾಶಿ ರಾಶಿ ಸುದ್ದಿಗಳೇ ರಾರಾಜಿಸುತ್ತಿವೆ ಆರೋಗ್ಯವನ್ನ ಗಟ್ಟಿಯಾಗಿ ಹಿಡಿದು ನಿಲ್ಲಿಸುವ ಆಸ್ಪತ್ರೆಗಳು ನಾಲ್ಕು ನಾಲ್ಕು ಅಂತಸ್ತುಗಳಲ್ಲಿ ನಿಲ್ಲುತ್ತಿರುವಾಗಲು ಆಸ್ಪತ್ರೆಗಳ ಒಳಗೆ ಅನಗತ್ಯವಾಗಿ ಉಸಿರು ಚೆಲ್ಲಿದ ಜೀವಗಳ ಲೆಕ್ಕ ಸಿಗ್ತಾ ಇಲ್ಲ. ವೇಗವಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ಚಲಿಸಲು ನಿರ್ಮಿಸಿದ ರಸ್ತೆಗಳು ಮೇಲೆ ರಕ್ತವು ಚೆಲ್ಲಿದ ಹನಿಗಳೆಷ್ಟು ಅರಿವಾಗುತ್ತಿಲ್ಲ. ಬದುಕಿನ ಕನಸುಗಳನ್ನು ಕಂಡ ಸಾವಿರ ಜನರ ನಡುವೆಯೂ ನಶ್ವರತೆಗಾಗಿ ಉಸಿರು ನಿಲ್ಲಿಸಿದ ಮನಸ್ಸುಗಳಷ್ಟು ಗೊತ್ತಾಗುತ್ತಿಲ್ಲ.  ದೂರದಲ್ಲೆಲ್ಲೋ ಚಲಿಸುತ್ತಿದ್ದ ಸಾವು ಇದೀಗ ಊರಿಗೆ ಬಂದು ಜಾಂಡ ಹೊಡೆದು ಬಿಟ್ಟಿದೆ. ಇಲ್ಲಿಂದ ಎದ್ದು ಹೋಗುವ ಯಾವ ಲಕ್ಷಣವೂ ಕಾಣ್ತಾ ಇಲ್ಲ. ಯಾರು ಸಾವನ್ನ ಅಷ್ಟು ಆದರ ಆಥಿತ್ಯದಿಂದ ಸ್ವಾಗತ ಮಾಡಿ ಊರಿಗೆ ಕರೆದುಕೊಂಡರೋ ಗೊತ್ತಿಲ್ಲ. ಹಾಗಾಗಿ ಪ್ರಶ್ನೆಗಳನ್ನ ಹೊತ್ತು ಕಾದಿದ್ದೇನೆ ಉತ್ತರದ ನಿರೀಕ್ಷೆಯಲ್ಲಿ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ