ಸ್ಟೇಟಸ್ ಕತೆಗಳು (ಭಾಗ ೭೯೫) - ಬೆಲೆ

ಸ್ಟೇಟಸ್ ಕತೆಗಳು (ಭಾಗ ೭೯೫) - ಬೆಲೆ

ಆತನಿಗೆ ಅಭಿನಯ ಅಂದ್ರೆ ಆಸೆ. ಅದಕ್ಕಾಗಿ ತನ್ನೂರಿನಲ್ಲಿ ಆಗುತ್ತಿದ್ದ ಎಲ್ಲಾ ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ. ದೊಡ್ಡವರು ಯಾರೋ ಹೇಳಿದರು, ನಿನ್ನ ಪ್ರತಿಭೆಯನ್ನು ಇನ್ನಷ್ಟು ಬೆಳಗಿಸುವುದಕ್ಕೆ ದೊಡ್ಡ ನಾಟಕ ಶಾಲೆಯೊಂದಕ್ಕೆ ಸೇರಿಕೊಳ್ಳಬೇಕು. ಅಲ್ಲಿ ಅಭ್ಯಾಸ ಮಾಡಬೇಕು ಅಂತ. ಅದಕ್ಕಾಗಿ ಆತ ಪರಿಶ್ರಮ ಪಟ್ಟ. ಅಭ್ಯಾಸ ಮಾಡಿದ ಅತ್ಯುತ್ತಮ ನಟ ಅನಿಸಿಕೊಂಡ ಆತ ಅಲ್ಲ ಆತನ ಜೊತೆ ಹಲವಾರು ಜನ ಅದೇ ಶಾಲೆಯಲ್ಲಿ ನಾಟಕವನ್ನು ಅಭ್ಯಾಸ ಕುಡಾ ಮಾಡಿದರು. ಪ್ರತಿ ಊರು ಊರಿಗೆ ತೆರಳಿ ನಾಟಕಗಳನ್ನು ಮಾಡುತ್ತಾ ಜನರ ಮನಸ್ಸನ್ನು ಮುಟ್ಟಿದರು. ಜನರಿಗೆ ನಾಟಕ ಏನು ಅನ್ನುವುದನ್ನು ತೋರಿಸುವುದಕ್ಕೆ ಆರಂಭ ಮಾಡಿದರು. ಕಾಲುಗಳು ಮುಂದುವರಿದವು. ಬದುಕು ಕಟ್ಟಿಕೊಳ್ಳಬೇಕಲ್ಲಾ ಹಾಗಾಗಿ ಅಭಿನಯವನ್ನೇ ಉಸಿರಾಗಿಸಿಕೊಂಡವರು ದೊಡ್ದ ಪರದೆಯೊಳಗೆ ಸಣ್ಣ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಅವರನ್ನು ಕರೆಯದೆ ಜನರಿಗೆ ಮೊಬೈಲಿನ ಒಳಗೆ ಪರಿಚಯವಾದ, ನಟನೆಯ ಗಂಧಗಾಳಿಯೇ ಗೊತ್ತಿಲ್ಲದ ಹಾಡಿಗೆ ತುಟಿ ಅಲುಗಿಸುವ ಲಲನಾಮಣಿಗಳು ಗಂಡು ಮಕ್ಕಳನ್ನು ಅಭಿನಯ ಚತುರರು ಎನ್ನುವಂತೆ ಬಿಂಬಿಸುತ್ತ ದೂರದರ್ಶನದ ಒಳಗಡೆ ಧಾರವಾಹಿಯ ಮುಖ್ಯ ಪಾತ್ರಕ್ಕೂ ಆಯ್ಕೆ ಮಾಡಿಬಿಟ್ಟರು. ಕಷ್ಟಪಟ್ಟು ವರ್ಷಗಳ ಕಾಲ ನೀನು ನಾಟಕವನ್ನು ಅಭ್ಯಾಸ ಮಾಡಬೇಕಾಗಿಲ್ಲ. ಟಿವಿಯ ಒಳಗಡೆ ಹಾಡುಗಳು ಚಿತ್ರವಿಚಿತ್ರವಾಗಿ ಕುಣಿದರೆ ಅವಕಾಶಗಳೇ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಈ ಸಂದೇಶ ರವಾನೆಯಾಗುತ್ತಿದೆಯೇ ಹೀಗಾಗುವಾಗ ನಿಜದ ಪ್ರತಿಭೆಗಳು ಎಲ್ಲಿ ವೇದಿಕೆಯ ಮರೆಯಾಗಿ ಹೋಗುತ್ತವೆ ಅನ್ನುವ ಭಯ ಕಾಡುತ್ತಿದೆ. ಬದಲಾಗಬೇಕಿರೋದು ವ್ಯಕ್ತಿಯೋ, ಸಮಾಜವೋ ಗೊತ್ತಾಗುತ್ತಿಲ್ಲ. ಪರಿಶ್ರಮಕ್ಕೆ ಬೆಲೆ ಇದೆ ಅಂತಾರೆ ಆದರೆ ಅದು ಮಾತಲ್ಲಿ ಮಾತ್ರ ಉಳಿದು ಬಿಟ್ಟಿದೆ ಅನ್ನೋದು ಅವನ ಬೇಸರ. 

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ