ಸ್ಟೇಟಸ್ ಕತೆಗಳು (ಭಾಗ ೭೯೬) - ಗುಟ್ಟು
ಆ ಭಗವಂತನ ಬಳಿ ದೊಡ್ಡದೊಂದು ಪುಸ್ತಕವಿದೆ. ಆ ಪುಸ್ತಕದಲ್ಲಿ ಅಂದವಾಗಿ ಸುಂದರ ನಗು ಮೊಗದಿಂದ ಕಾಣುವವರ ಭಾವಚಿತ್ರಗಳನ್ನ ಜೋಡಿಸಿಡಲಾಗುತ್ತದೆ. ಯಾಕೆಂದರೆ ಅವರಿಗೆ ಇನ್ನೊಂದಷ್ಟು ಹೆಚ್ಚು ವರ್ಷಗಳ ಕಾಲ ಬದುಕುವ ಅವಕಾಶವನ್ನು ನೀಡಬೇಕು ಅನ್ನುವ ಕಾರಣಕ್ಕೆ. ಜೊತೆಗೆ ಎಲ್ಲವನ್ನ ಎದುರಿಸಿ ಬದುಕುವ ಸಾಮರ್ಥ್ಯವನ್ನು ನೆಮ್ಮದಿಯ ಬದುಕನ್ನ ಎಲ್ಲವನ್ನು ಆ ಭಗವಂತ ನೀಡುತ್ತಾನೆ. ಆದರೆ ಅವನ ಷರತ್ತು ಒಂದೇ, ಏನೆಂದರೆ ನಗುತ್ತಿರಬೇಕು. ಅಂದದ ಮುಖಕೆ ಮುದ್ದಾದ ನಗುವಿದ್ದರೆ ಅದು ಭಗವಂತನಿಗೂ ಪ್ರಿಯವಾಗಿ, ಆತನ ದೊಡ್ಡ ಪುಸ್ತಕದೊಳಗೆ ಜಾಗವನ್ನು ಪಡೆದುಕೊಳ್ಳುತ್ತೇವೆ. ಆದರೆ ಸಮಸ್ಯೆ ಎಲ್ಲಿರೋದು ಗೊತ್ತಾ ಆ ಭಗವಂತ ಯಾವಾಗ ನಮ್ಮ ಭಾವಚಿತ್ರವನ್ನು ಸ್ವೀಕರಿಸಿಕೊಳ್ಳುತ್ತಾನೆ ಅನ್ನೋದು ಗೊತ್ತಿಲ್ಲ .ಅದಕ್ಕೆ ಆತ ಯಾವಾಗ ಬೇಕಾದರೂ ನಮ್ಮ ಭಾವಚಿತ್ರವನ್ನು ತೆಗೆಯಬಹುದು. ಆ ಕಾರಣಕ್ಕೆ ನಾವು ಪ್ರತಿಕ್ಷಣವೂ ನಗುತ್ತಿರಬೇಕು. ನೋವಾಗುತ್ತೆ, ಬೇಸರವಾಗುತ್ತೆ ಆದರೆ ಅದನ್ನೇ ತಲೆಯ ಮೇಲೆ ಹೊತ್ತುಕೊಂಡು ದಿನವೂ ಮುಖವನ್ನ ಬಾಡಿಸಿಕೊಂಡಿದ್ದರೆ ಹೆಚ್ಚು ವರ್ಷಗಳ ಕಾಲ ಬದುಕುವ ಅವಕಾಶವನ್ನು ನಾವೇ ಕಳೆದುಕೊಳ್ಳುತೇವಲ್ಲ. ಅದಕ್ಕಾಗಿ ಭಗವಂತ ನಿನ್ನೆ ದಾರಿಯಲ್ಲಿ ಸಿಕ್ಕಿದ್ದ ಆತನನ್ನ ಯಾರು ಗುರುತಿಸಲಿಲ್ವಂತೆ. ಎಲ್ಲರೂ ಅವರವರ ಪ್ರೀತಿಯ ಆಲೋಚನೆಯ ಚಿತ್ರದ ಭಗವಂತನನ್ನ ಮಾತ್ರ ಕಲ್ಪಿಸಿಕೊಂಡಿದ್ದರು. ಭಗವಂತ ಹೀಗೂ ಇರುತ್ತಾನೆ ಅಂತ ಅವರ್ಯಾರು ಅಂದುಕೊಂಡಿರಲಿಲ್ಲ. ಹಾಗಾಗಿ ಸಿಕ್ಕಿದ ಭಗವಂತ ಹೇಳಿದ ಜನರಿಗೊಂದಿಷ್ಟು ನಗುವುದನ್ನು ತಿಳಿಸು. ನಕ್ಕವರು ದಿನವೂ ನಗುತ್ತಿರುವವರು ಮಾತ್ರ ಹೆಚ್ಚು ವರ್ಷ ಬದುಕುತ್ತಾರೆ. ನೆಮ್ಮದಿಯ ಜೀವನವನ್ನು ಕಂಡೆ ಕಾಣುತ್ತಾರೆ. ಅಂತ ಅದಕ್ಕಾಗಿ ಈ ಗುಟ್ಟನ್ನ ನಿಮ್ಮತ್ರ ಮಾತ್ರ ಹೇಳ್ತಾ ಇದ್ದೀನಿ ಹಾಗಾಗಿ ಇದನ್ನ ಸ್ವೀಕರಿಸ್ತೀರಿ ಅಂತ ನಂಬಿದ್ದೇನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ