ಸ್ಟೇಟಸ್ ಕತೆಗಳು (ಭಾಗ ೭೯೯) - ಪ್ರೀತಿ

ಸ್ಟೇಟಸ್ ಕತೆಗಳು (ಭಾಗ ೭೯೯) - ಪ್ರೀತಿ

ಯಾರು ಇಲ್ಲಿ? ಮದ್ದು ಕೊಡೋರು ಯಾರು? ಎಷ್ಟು ಹೊತ್ತಿಂದ ಕಾಯ್ತಾ ಇದ್ದೇವೆ? ಯಾರೂ ಒಬ್ಬರು ಕೇಳೋರಿಲ್ಲ. ಆಸ್ಪತ್ರೆಗೆ ಬಂದವರನ್ನು ಸರಿಯಾಗಿ ನೋಡಿಕೊಳ್ಳುವುದಕ್ಕೆ ಆಗುವುದಿಲ್ಲ ಎಂದರೆ ನೀವು ಯಾಕ್ರೀ ಇಲ್ಲಿ ಕೆಲಸ ಮಾಡುತ್ತೀರಾ? ಬಡವರು ಅಂತ ಅಂದ್ರೆ ನಿಮಗೆ ಸದರ ಅಲ್ಲವೇ? ದೇವರು ಎಲ್ಲರಿಗೂ ಒಂದಲ್ಲ ಒಂದು ಕಾಲ ಕೊಟ್ಟಿರುತ್ತಾನೆ. ನಿಮಗೂ ಬರುತ್ತೆ ಅಲ್ಲಿವರೆಗೆ ಕಾಯಬೇಕು. ಆಸ್ಪತ್ರೆಯಲ್ಲೊಬ್ಬ ಅಜ್ಜ ಹೀಗೆ ಬೊಬ್ಬೆ ಹೊಡಿತಾ ಇದ್ದರು. ಅವರ ಈ ಬೊಬ್ಬೆಗೆ ಕಾರಣವೇನು ಅಂತಂದ್ರೆ ನಿನ್ನೆ ಸಂಜೆ ತನ್ನ ಪ್ರೀತಿಯ ಮಡದಿ ಕಾಲು ಜಾರಿ ಬಿದ್ದಾಗ ಕಾಲು ಉಳುಕಿತು. ಅವಳನ್ನ ಇದೇ ಆಸ್ಪತ್ರೆಗೆ ಸೇರಿಸಿದರು. ಒಂದು ದಿನವೂ ಅವಳು ಹಾಗೆ ಮಲಗಿಕೊಂಡಿದ್ದನ ನೋಡಿಲ್ಲ. ನೋವಿನಿಂದ ಅಳುವುದನ್ನು ಗಮನಿಸಿಯೂ ಇಲ್ಲ. ಆದರೆ ಈಗ ಕಣ್ಣ ಮುಂದೆ ಹೀಗಾಗುತ್ತಿರುವುದನ್ನ ಗಮನಿಸಿ ಅವಳಿಗೆ ಮದ್ದು ಕೊಟ್ಟು ಎಲ್ಲವೂ ಸರಿಯಾಗಿಸಿ ಆಕೆಯನ್ನ ಮತ್ತೆ ಊರಿಗೆ ಕರೆದುಯ್ಯುವ ತವಕ. ಅದಕ್ಕಾಗಿ ಅತ್ತಿಂದಿತ್ತ ಓಡಾಟ. ಎಲ್ಲರನ್ನ ಮತ್ತು ಎಲ್ಲವನ್ನ ಸಂಪಾದಿಸಿಕೊಂಡು ಮುದ್ದಿನ ಮಡತಿಯ ಕೈ ಹಿಡಿದು ಮನೆಗೆ ನಡೆದು ಕರೆದೊಯ್ಯಬೇಕು. ಆಕೆಯ ಎಲ್ಲ ಸೌಖ್ಯ ಗಳಿಗೂ ತಾನು ಕಾರಣವಾಗಬೇಕು. ಎನ್ನುವ ಎಲ್ಲಾ ಆಸೆಗಳು ಇದ್ದಾವೆ. ಇವರಿಬ್ಬರ ಪ್ರೀತಿ ಹೆಚ್ಚಾಗಿತ್ತು ಅನ್ನೋದು ಭಗವಂತನಿಗೆ ಅಸೂಯೆಯಾಯಿತು ಏನು ಅದಕ್ಕಾಗಿ ಮಕ್ಕಳನ್ನೇ ಕೊಡಲಿಲ್ಲ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸಿ ಹಾಗೆ ಬದುಕು ಕಟ್ಟಿಕೊಂಡಿದ್ದಾರೆ. ಮುದ್ದಿನ ಮಡತಿಯ ಆರೋಗ್ಯಕ್ಕೋಸ್ಕರ ಏನು ಮಾಡಬೇಕು ಅನ್ನೋದು ತೋಚದೆ ಸುಮ್ಮನೆ ಎಲ್ಲರ ಮೇಲು ರೇಗುತ್ತಿದ್ದಾರೆ.. ಒಟ್ಟಿನಲ್ಲಿ ಪ್ರೀತಿ ಉಳಿಯಬೇಕು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ