ಸ್ಟೇಟಸ್ ಕತೆಗಳು (ಭಾಗ ೮೦೧) - ದಿಶೆ

ಮನೆಯ ಮಗಳ ಮದುವೆ ಸಂಭ್ರಮದಿಂದಾಗಬೇಕು. ಹಾಗಾಗಿ ಒಂದಷ್ಟು ಕಡೆ ಸಾಲವನ್ನು ಮಾಡಿ ಮದುವೆ ತಯಾರಿ ಆರಂಭವಾಯಿತು. ಮದುವೆಯ ದಿನವೂ ಬಂತು ಮದುವೆ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ಬಂದವರೆಲ್ಲರಿಗೂ ಖುಷಿ ಎಲ್ಲರೂ ಮದುವೆಯನ್ನು ಹೊಗಳಿದರು. ಸಂಭ್ರಮಕ್ಕೆ ಕಾರಣರಾದ ಅಪ್ಪನಿಗೆ ತುಂಬಾ ಖುಷಿ, ಸಾರ್ಥಕ ಭಾವ. ಆದ್ರೆ ಅಡಿಗೆ ಮನೆಗೆ ತೆರಳಿದಾಗ ಅವರಿಗೆ ನಿಜದ ನೋವಿನ ಅರಿವಾಯಿತು. ಅವರ ದುಡಿಮೆಯ ಸಮಯದಲ್ಲಿ ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಇದ್ದಾಗ ಒಂದಗುಳನ್ನು ವ್ಯರ್ಥ ಮಾಡದೆ ಪೂರ್ತಿ ಉಂಡು ಏಳುತ್ತಿದ್ದರು ಆದರೆ ಮಗಳ ಮದುವೆಯ ದಿನದಲ್ಲಿ ಸಂಭ್ರಮವನ್ನು ಹೆಚ್ಚಿಸುವುದಕ್ಕೆ ಹೋಗಿ ಬಗೆ ಬಗೆಯ ತಿನಿಸುಗಳನ್ನ ಮಾಡಿ ಎಲ್ಲವೂ ತಟ್ಟೆಗಳಲ್ಲಿ ಹಾಗೆ ಉಳಿದಿತ್ತು. ಬಂದವರೆಲ್ಲರಿಗೂ ಕೂಡ ಯಾವುದನ್ನು ಪೂರ್ತಿಯಾಗಿ ತಿನ್ನುವ ವ್ಯವಧಾನವೇ ಇಲ್ಲ. ಎಲ್ಲವೂ ವ್ಯರ್ಥವಾಗಿ ಕಸದ ಬುಟ್ಟಿಗೆ ಸೇರಿದಾಗ ಮದುವೆಯ ಸಾರ್ಥಕ ಪದ ಅಲ್ಲೇ ಮರೆಯಾಯಿತು. ಊಟ ಮಾಡುತ್ತಿದ್ದ ಸಣ್ಣ ಮಕ್ಕಳೆಲ್ಲರೂ ಕೂಡ ತಟ್ಟೆಯಲ್ಲಿ ಎಲ್ಲವನ್ನ ಹಾಗೆ ಬಿಟ್ಟು ಬರಿಯ ಸಿಹಿಯ ತಿಂಡಿಗಳನ್ನು ಅಷ್ಟೇ ತಿನ್ನುತ್ತಿದ್ದರು. ಬಡಿಸಿದವರ ತಪ್ಪೋ, ಬಡಿಸಿಕೊಂಡವರ ತಪ್ಪೋ, ತಿನ್ನದವರ ತಪ್ಪೋ ಗೊತ್ತಿಲ್ಲ. ಕಾರ್ಯಗಳನ್ನ ಮುಗಿಸಿ ಮನೆ ಕಡೆ ನಡೆದರೂ ಸುದ್ದಿಯನ್ನ ಹಂಚಬೇಕು ಅಂತ ಗಟ್ಟಿ ನಿರ್ಧಾರ ಮಾಡಿದರು. ಮಗಳ ಮದುವೆ ಬದುಕಿನ ದೊಡ್ಡ ದಿಶೆಯನ್ನೇ ಬದಲಿಸಿತ್ತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ