ಸ್ಟೇಟಸ್ ಕತೆಗಳು (ಭಾಗ ೮೦೩)- ಅವರು

ಎಲ್ಲರೂ ಜೊತೆಗೆ ಬದುಕುತ್ತಾ ಇದ್ದವರು. ಒಂದಷ್ಟು ಸಮಯದ ಹಿಂದೆ ಜೊತೆಗೆ ಬದುಕಿದ್ದವರು, ಹಾಗೆ ಕಾಲಗಳು ಮುಂದುವರಿದಂತೆ ಅವರವರ ಬದುಕಿನ ದಾರಿಯನ್ನ ಕಂಡುಕೊಳ್ಳುವುದಕ್ಕೆ ಒಂದೊಂದು ಊರಿನ ಕಡೆಗೆ ಪಯಣ ಬೆಳೆಸಿದರು. ಒಬ್ಬ ತಾನು ಬದುಕಿರುವ ಊರಿನಲ್ಲಿ ಜೀವನವನ್ನು ಅದ್ಭುತವಾಗಿ ಕಟ್ಟಿಕೊಳ್ಳುವುದಕ್ಕೆ ಯೋಜನೆ ರೂಪಿಸಿದರೆ, ಇನ್ನೊಬ್ಬ ಪರಿಚಯವಿಲ್ಲದ ಊರಿನಲ್ಲಿ ದೊಡ್ಡ ಅವಕಾಶಕ್ಕಾಗಿ ಎದುರು ನೋಡುತ್ತಿದ್ದ. ಇನ್ನೊಬ್ಬ ಇನ್ನೊಂದ್ಯಾವುದೋ ಊರಿಗೆ ತೆರಳಿ ಬದುಕಿನ ದಾರಿ ಹೇಗಿರಬಹುದು ಅಂತ ಯೋಚಿಸೋದಕ್ಕೆ ಪ್ರಾರಂಭ ಮಾಡಿದ. ದಿನಗಳು ಉರುಳಿದವು. ಅವರವರ ಕೆಲಸಗಳು ಹಾದಿಗಳು ಮುಂದುವರಿಯುತ್ತಿದ್ದವು. ಹಾಗೆಯೇ ಮತ್ತೆ ಎಲ್ಲರೂ ಜೊತೆಗೆ ಸೇರುವ ದಿನವೂ ಬಂದಿತ್ತು. ಮತ್ತೆ ಜೊತೆಗೆ ಸೇರಿ ದುಂಡು ಮೇಜಿನ ಬಳಿಯಲಿ ಕುಳಿತು ಚರ್ಚಿಸುವುದಕ್ಕೆ ಆರಂಭ ಮಾಡಿದ್ರು. ತಾವು ಜೊತೆಗಿದ್ದಾಗ ಕಲಿಯಬೇಕಾಗಿದ್ದೇನು ? ಕಳೆದುಕೊಂಡದ್ದೇನು? ದೂರ ಹೋದಾಗ ಹೊಸ ಊರಿನ ಹೊಸ ಪರಿಚಯಸ್ತರ ನಡುವೆ ಜೀವನದ ಅನುಭವಗಳು ಏನಿದೆ? ತಾವು ಅಂದುಕೊಂಡದ್ದೇನು ಆಗಿರುವುದೇನು? ಎಲ್ಲವನ್ನ ಮನಸ್ಪೂರ್ತಿಯಾಗಿ ಹಂಚಿಕೊಂಡರು. ತಪ್ಪುಗಳ ಅರಿವಾಯಿತು. ಸರಿ ದಾರಿಗಳ ವಿಚಾರಗಳು ತಿಳಿಯಿತು. ಮುಂದೆ ಮಾಡಬೇಕಾಗಿರುವುದನ್ನ ಒಂದಷ್ಟು ಜನರ ಜೊತೆ ಚರ್ಚಿಸಿ ಮುಂದುವರಿಬೇಕು ಅನ್ನೋ ನಿರ್ಧಾರ ಮಾಡಿದರು. ಆಗಾಗ ಜೊತೆ ಸೇರಿ ನಡೆದ ದಾರಿಯ ಹಿಂತಿರುಗಿ ನೋಡಿ ಮತ್ತೆ ಮುಂದುವರಿಬೇಕು ಅನ್ನೋ ತೀರ್ಮಾನ .ಮತ್ತೆ ಭೇಟಿಯ ದಿನವನ್ನು ನಿರ್ಧರಿಸಿ ತಾವು ತಲುಪಬೇಕಾದ ಗುರಿಯನ್ನು ನಿಗದಿ ಮಾಡಿ ಒಂದಷ್ಟು ಮೆಟ್ಟಿಲುಗಳನ್ನೇರಿ ಮತ್ತೆ ಸಂಧಿಸುವ ವಚನ ತೆಗೆದುಕೊಂಡರು. ಅವರ ನಿರ್ಧಾರ ಸರಿಯಾಗಿತ್ತು ಮುಂದಿನ ಹೆಜ್ಜೆಗಳು ಗಟ್ಟಿಯಾಗಿ ಇಡುವ ಛಲವು ಅವರಲ್ಲಿತ್ತು. ಬದುಕು ಅವರು ಯೋಚಿಸಿದಂತೆ ನಡೆಯುತ್ತದೋ ಅಥವಾ ಬದುಕೆ ಅವರನ್ನು ಯೋಚಿಸುವಂತೆ ಮಾಡುತ್ತದೋ ಗೊತ್ತಿಲ್ಲ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ