ಸ್ಟೇಟಸ್ ಕತೆಗಳು (ಭಾಗ ೮೦೭)- ಪ್ರಶ್ನೆ

ಸ್ಟೇಟಸ್ ಕತೆಗಳು (ಭಾಗ ೮೦೭)- ಪ್ರಶ್ನೆ

ಆ ಪತ್ರಿಕೆಯ ಮುಖಪುಟದಲ್ಲಿ ದೊಡ್ಡ ಅಕ್ಷರದಲ್ಲಿ ಕೆತ್ತಲಾಗಿತ್ತು. "ಪ್ರತಿಯೊಂದು ಜೀವಿಯ ಒಳಗೂ ಭಗವಂತನಿದ್ದಾನೆ ." ಪತ್ರಿಕೆಯನ್ನ ಮಡಚಿಟ್ಟಾಗ ಕೊನೆಯ ಪುಟದಲ್ಲಿ ಇತ್ತೀಚೆಗೆ ಮರಣ ಹೊಂದಿದ ದೊಡ್ಡ ಆನೆಯ ಭಾವಚಿತ್ರ ಪ್ರಕಟವಾಗಿತ್ತು. ಈಗ ನನ್ನೊಳಗೆ ಒಂದಷ್ಟು ಪ್ರಶ್ನೆಗಳಿವೆ. ಭಗವಂತನ ಇರುವಿಕೆ ಹೌದಾದರೆ ಜೀವಿಯನ್ನ ಲೆಕ್ಕಕ್ಕಿಂತ ಜಾಸ್ತಿ ದುಡಿಸಿಕೊಳ್ಳುವುದು ಯಾತಕ್ಕೆ? ಮೂರ್ತಿಯಾಗಿ ನಿಂತರೆ ಭಗವಂತನ ಒಳಗೆ ಪೂಜಿಸುತ್ತೇವೆ ಆತ ವ್ಯಕ್ತಿಯಾಗಿಯೂ ಜೀವಿಯಾಗಿಯೂ ಕಣ್ಣಮುಂದೆ ಇದ್ದರೆ ಆತನನ್ನ ಬರಿಯ ಮನುಷ್ಯನಾಗಷ್ಟೇ ನೋಡುತ್ತೇವೆ, ಪ್ರಾಣಿಯಾಗಿ ಎಲ್ಲ ಕೆಲಸವನ್ನು ಮಾಡಿಸಿಕೊಳ್ಳುತ್ತೇವೆ. ಭಗವಂತನಿಗೆ ಸಿಗುವ ಯಾವ ಸವಲತ್ತುಗಳು ಬೇರೆ ಯಾರಿಗೂ ಸಿಗುವುದಿಲ್ಲ. ದಾರಿ ಬದಿಯ ನಾಯಿಗೆ ಕಲ್ಲು ಬಿಸಾಡುತ್ತೇವೆ, ರಸ್ತೆಯಲ್ಲಿ ಚಲಿಸುವಾಗ ವೇಗದಿಂದ ಕೆಲವೊಂದು ಪ್ರಾಣಿಗಳ ಸಾವಿಗೆ ಕಾರಣವಾಗುತ್ತೇವೆ. ನಮ್ಮ ಜೊತೆಗೆ ನಡೆಯುತ್ತಿರುವವರಿಗೆ ಮನಸ್ಸಿಗೊಂದುಷ್ಟು ನೋವು ನೀಡುತ್ತೇವೆ? ಕೆಲವರಿಗೆ ಕಣ್ಣೀರನ್ನು ಕೊಟ್ಟು ಸಂಭ್ರಮ ಪಡುತ್ತೇವೆ. ಇವೆಲ್ಲವೂ ನಾವು ಭಗವಂತನಿಗೆ ಮಾಡುವ ಮೋಸವಲ್ಲವೇ? ಹಾಗಾದರೆ ನಾವೀಗ ಕೈ ಮುಗಿದು ಭಗವಂತನನ್ನ ಬೇಡಿ ಏನು ಪ್ರಯೋಜನ? ಭಗವಂತನಿಗೆ ತೊಂದರೆ ಕೊಟ್ಟು ಮತ್ತೆ ಒಳಿತಿಗಾಗಿ ಭಗವಂತನನ್ನೇ ಪ್ರಾರ್ಥಿಸುವುದು ಎಷ್ಟು ಸಮಂಜಸ. ಅದಕ್ಕೆ ಪ್ರಶ್ನೆಗಳನ್ನ ಹೊತ್ತು ನಿಮ್ಮ ಮುಂದೆ ಇದ್ದೇನೆ ಉತ್ತರದ ನಿರೀಕ್ಷೆಯಲ್ಲಿ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ