ಸ್ಟೇಟಸ್ ಕತೆಗಳು (ಭಾಗ ೮೦೮)- ಕಾಯುತ್ತಿದ್ದಾನೆ

ಈ ಸಣ್ಣ ಗೂಡಿನೊಳಗೆ ಬಂದು ಹೋಗುವವರೆಲ್ಲರೂ ಕೈಯಲ್ಲಿ ಒಂದಿಷ್ಟು ಹಣವನ್ನ ಪಡೆದೇ ಹೊರಗೆ ಹೋಗುತ್ತಾರೆ. ಹೆಚ್ಚಿನವರು ಆ ಸಣ್ಣ ಗೂಡಿನೊಳಕ್ಕೆ ಬಂದು ತಮ್ಮ ಜೀವನದ ದಿನಚರಿಗೆ ಅಗತ್ಯವಾದ ಹಣವನ್ನ ಪಡೆದು ಅಲ್ಲಿಂದ ಹೊರಡುತ್ತಾರೆ. ಇವರೆಲ್ಲರನ್ನ ಪ್ರತಿದಿನವೂ ಅಲ್ಲೇ ನಿಂತು ಕಾಯುತ್ತಿರುವ ರಮೇಶ ನೋಡುತ್ತಾನೆ. ರಮೇಶನಿಗೂ ಅದರೊಳಗೆ ಹೋಗಿ ಒಂದಷ್ಟು ದುಡ್ಡನ್ನ ಪಡೆದುಕೊಳ್ಳಬೇಕು ಅನ್ನುವ ಆಸೆ. ಆದರೆ ಜೀವನದ ಸ್ಥಿತಿಗತಿಗಳು ಹಾಗೆ ಇಲ್ವಲ್ಲ. ಅ ಕಾರಣಕ್ಕೆ ತನ್ನ ಪುಟ್ಟ ಎರಡು ಮಕ್ಕಳಲ್ಲಿ ಕನಸುಗಳನ್ನು ಬಿತ್ತಿದ್ದಾನೆ. ತಾನು ರಾತ್ರಿ ಹಗಲೆನ್ನದೆ ಶ್ರಮಪಟ್ಟು ಅವರನ್ನು ಶಾಲೆಗೆ ಕಳುಹಿಸಿದ್ದಾನೆ. ಅವರ ಬೇಕು ಬೇಡಗಳನ್ನ ತಿಳಿದು ಎಲ್ಲವನ್ನು ನೀಡಿದ್ದಾನೆ ತಾನು ರಾತ್ರಿ ಮಲಗುವಾಗ ನೀರೇ ಕುಡಿದು ಮಕ್ಕಳ ಹೊಟ್ಟೆಗೆ ಅನ್ನ ,ಕೈಗೊಂಡು ಪುಸ್ತಕ, ಆಲೋಚನೆಗೆ ಬೇಕಾದ ಎಲ್ಲ ಸರಂಜಾಮುಗಳನ್ನ ನೀಡಿದ್ದಾನೆ .ತನ್ನ ಮಕ್ಕಳು ಆ ಸಣ್ಣ ಗೂಡಿನೊಳಕ್ಕೆ ಹೋಗಿ ಕೈ ತುಂಬ ದುಡ್ಡನ್ನ ಪಡೆದು ಹೊರ ಹೋಗಿ ತಮ್ಮ ಜೀವನವನ್ನು ನೋಡಿಕೊಳ್ಳಬೇಕು ಮುಂದೊಂದು ದಿನ ಅನ್ನುವ ಆಸೆಯಿಂದ ತನೆಗೆ ಕಷ್ಟವಾಗುತ್ತಿದೆ ಅನ್ನುವ ಕಾರಣಕ್ಕೆ ಅವರನ್ನು ದುಡಿಯುವುದಕ್ಕೆ ಕಳುಹಿಸುತ್ತೇನೆ ಅನ್ನುವ ಯೋಚನೆ ಅವನಲ್ಲಿಲ್ಲ. ಶಿಕ್ಷಣವೊಂದೇ ಬದುಕನ್ನ ಬದಲಾಯಿಸುವ ಮಂತ್ರ ಅನ್ನೋದನ್ನ ಆತ ಅರಿತಿದ್ದಾನೆ .ಸಣ್ಣ ಗೂಡಿನ ಒಳಗಿನ ದುಡ್ಡನ್ನು, ಮಕ್ಕಳ ಕನಸನ್ನು, ಅವರ ಮುಂದಿನ ಬದುಕನ್ನು, ಬದಲಾವಣೆಯ ಜಗತ್ತನ್ನು ಎಲ್ಲವನ್ನು ಆತ ಅಲ್ಲೇ ಇಟ್ಟ ಪ್ಲಾಸ್ಟಿಕ್ ಚಯರಿನಲ್ಲಿ ಕುಳಿತು ಹಗಲು ರಾತ್ರಿ ಬಿಸಿಲು ಚಳಿಗಾಳಿ ಎನ್ನದೆ ಕಾಯುತ್ತಿದ್ದಾನೆ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ