ಸ್ಟೇಟಸ್ ಕತೆಗಳು (ಭಾಗ ೮೧೩)- ಸಾವು

ಸಾವಿಗೂ ಬೇಸರವೆನಿಸಿದೆ. ಮತ್ತೆ ಊರಿನ ಕಡೆಗೆ ಪಯಣವೇ ಬೇಡ ಅಂದುಕೊಂಡಿತ್ತು. ಆದರೂ ಮತ್ತೆ ಊರಿನ ಕಡೆಗೆ ಬರುವಂತಾಗಿದೆ. ಸಾವು ಮತ್ತೆ ಮತ್ತೆ ಕೇಳಿಕೊಂಡಿತ್ತು. ಬರುವುದಿಲ್ಲವೆಂದು ಹಠ ಮಾಡಿತ್ತು. ಆದರೆ ಆ ಎರಡು ಜೀವಗಳು ಮನಸ್ಸಿಗಾದ ನೋವಿಗಿಂತ ದೊಡ್ಡದೇನು ಇಲ್ಲ ಅಂದುಕೊಂಡು ಹಾಗೆ ಉಸಿರನ್ನು ಸಾವಿನ ಕೈಗೆ ಕೊಟ್ಟುಬಿಟ್ಟರು. ಸಾವು ಒಲ್ಲದ ಮನಸ್ಸಿನಿಂದ ಹಾಗೆ ಪಡೆದುಕೊಂಡು ಹೊರಟು ಹೋಯಿತು. ಸಾವಿಗೂ ಗೊತ್ತಿತ್ತು. ಜನ ಮತ್ತೆ ಮತ್ತೆ ಶಪಿಸುತ್ತಾರೆ, ಹಲವು ಜನರ ಕಣ್ಣೀರಿನ ಶಾಪ ತಟ್ಟುತ್ತದೆ ಅನ್ನುವ ವಿಚಾರ. ಆ ಎರಡು ಜೀವಗಳು ದುಃಖವನ್ನ ಹಂಚಿಕೊಂಡಿದ್ದರೆ ಇಡೀ ಊರೇ ಜೊತೆಗೆ ನಿಲ್ಲುತ್ತಿತ್ತು. ಕಷ್ಟಕ್ಕೆ ಹೆಗಲು ಕೊಡುತ್ತಿತ್ತು. ಯಾಕೆಂದರೆ ಊರಿನ ದುಃಖಕ್ಕೆ ಹೆಗಲಾದವರು, ಕಣ್ಣೀರು ಒರೆಸಿದವರಲ್ಲವೇ? ಕಳೆದುಕೊಂಡಕ್ಕಿಂತ ಹೆಚ್ಚಿನ ಪ್ರೀತಿ ಖಂಡಿತವಾಗಿಯೂ ಅವರಿಗೆ ಸಿಗುತ್ತಾ ಇತ್ತು. ಆದರೆ ಅದೆಲ್ಲಕ್ಕಿಂತಲೂ ದೊಡ್ಡದಾದ ನೋವು ಅವರ ಮನಸ್ಸನ್ನು ಕಾಡಿರಬೇಕು, ಭಯ ಆವರಿಸಿರಬೇಕು. ಸಾವಿನ ಕೆಲ ಕ್ಷಣದವರೆಗೂ ದೇವರ ಸಾನಿಧ್ಯದಲ್ಲಿ ಭಕ್ತಿಯಿಂದ ಕೈ ಮುಗಿದವರು, ಹಾಗೆಯೇ ದೇವರನ್ನು ನೋಡೋಕೆ ಹೊರಟು ಹೋದರು. ಊರಿನ ಮನೆ ಮೌನವಾಗಿತ್ತು. ಮನಸ್ಸುಗಳೆಲ್ಲವೂ ಹಾಗೆ ಮುದುಡಿ ಹೋಗಿದ್ದವು. ಯಾರಿಗೂ ಯಾವುದರಲ್ಲೂ ಆಸಕ್ತಿ ಇರದಂತಹ ಭಾವ ನಿರ್ಮಾಣವಾಗಿತ್ತು. ಎಲ್ಲರ ಮನೆಗಳು ಸಾವನ್ನು ಕೋಪದ ಕಣ್ಣಿನಿಂದಲೇ ಕಾಣುತ್ತಿದ್ದಾರೆ. ಸಾವಿಗೂ ಭಯವಾಗಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ