ಸ್ಟೇಟಸ್ ಕತೆಗಳು (ಭಾಗ ೮೧೪)- ನಂಬಿಕೆ

ಮನೆಗಳನ್ನು ಎಲ್ಲರೂ ಕಟ್ಟಿಕೊಳ್ಳುತ್ತಾರೆ. ಆದರೆ ಅವರು ಗಾಜಿನ ಮನೆಯೊಂದನ್ನು ಕಟ್ಟಿಕೊಂಡಿದ್ದರು. ಮನೆಯೊಳಗಿನ ಎಲ್ಲ ಸತ್ಯಗಳು ಮನೆಯ ಹೊರಗಿನವರಿಗೂ, ಹೊರಗೆ ಕಂಡ ದೃಶ್ಯಗಳೆಲ್ಲವೂ ಮನೆಯ ಒಳಗೂ ಕಾಣುವಂತಹ ವ್ಯವಸ್ಥೆ ಅವರದು. ಜೊತೆಗೆ ತುಂಬಾ ಜತನವಾಗಿ ಮನೆಯನ್ನ ಕಾಯ್ದಿಟ್ಟುಕೊಂಡಿದ್ದರು. ಸಣ್ಣ ಕಲ್ಲು ಬಿದ್ದರೂ ಒಡೆದು ಚೂರಾಗುವ ಪರಿಸ್ಥಿತಿ. ಇಂಥಹ ಮನೆಯನ್ನು ಹಲವು ವರ್ಷದಿಂದ ಒಂದಿನಿತೂ ಗಾಯವಾಗದಂತೆ ಗಾಜಿನ ಮನೆಯನ್ನ ಗಟ್ಟಿಗೊಳಿಸಿ ಹಾಗೆಯೇ ಕಾಪಿಟ್ಟುಕೊಂಡು ಬಂದವರು. ಆದರೆ ನೋಡಿದ ಭಗವಂತನಿಗೆ ತಾನು ಭೂಮಿಯನ್ನ ನಡಿಸುವುದಕ್ಕಿಂತಲೂ ಹೆಚ್ಚು ಜತನದಿಂದ ಗಾಜಿನ ಮನೆಯನ್ನ ಇವರು ಇಟ್ಟುಕೊಂಡಿದ್ದಾರಲ್ಲ ಅನ್ನುವ ಅಸೂಯೆ ಉಂಟಾಯಿತೋ ಏನೋ. ಸಣ್ಣದಾಗಿ ಬಿರುಕಿನ ಸೂಚನೆಗಳನ್ನ ನೀಡಿದ. ನಂಬಿಕೆಯ ಗಾಜು ಒಡೆದು ಹೋಗಿತ್ತು. ಇಷ್ಟು ದಿನದವರೆಗೆ ಕಾಪಿಟ್ಟುಕೊಂಡು ಬಂದಿದ್ದ ಮನೆ ಕಣ್ಣಮುಂದೆ ಒಡೆದು ಹೋಗಿರುವುದನ್ನ ಕಂಡು ಮನಸ್ಸು ಭಾರವಾಯಿತು. ಊರವರು ಏನಂದುಕೊಂಡಾರೋ, ಗುಸು-ಗುಸು ಪಿಸು ಪಿಸು ಮಾತುಗಳೆಲ್ಲವೂ ಎದೆಯನ್ನ ಒಡೆಯುವ ಭಯ ಆವರಿಸಿ ಮನೆಯೊಳಗೆ ಮಣ್ಣಾಗುವ ಯೋಚನೆ ಮಾಡಿದರು. ನಂಬಿಕೆಯ ಗಾಜು ಒಡೆದ ಕಾರಣ ಮನೆ ಧಾರಾಶಾಹಿಯಾಯಿತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ