ಸ್ಟೇಟಸ್ ಕತೆಗಳು (ಭಾಗ ೮೧೮)- ಜಾತ್ರೆ

ಜಾತ್ರೆ ಜೋರಾಗಿದೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಜಾತ್ರೆ. ಅಲ್ಲಿ ನಡೆಯುತ್ತಿರುವ ಎಲ್ಲ ವಿಚಾರಗಳನ್ನ ಕಣ್ತುಂಬಿಸಿಕೊಂಡು ಬದುಕಿನ ವಿಶೇಷತೆಗಳನ್ನ ಅನುಭವಿಸುವುದಕ್ಕೆ ಸುತ್ತು ಹಾಕುತ್ತಿರುವವರು ಒಂದು ಕಡೆ, ಬದುಕಿನ ಅಗತ್ಯಕ್ಕಾಗಿ ತಯಾರಿಸಿದ ವಸ್ತುಗಳನ್ನ ಕರೆದು ಕರೆದು ಮಾರಾಟ ಮಾಡುತ್ತಿರುವವರ ಜಾತ್ರೆಯೇ ಇನ್ನೊಂದು ಕಡೆ, ತಮ್ಮ ದೇಹವನ್ನು ದುಡಿಸುತ್ತಾ ಹಗ್ಗದ ಮೇಲಿನ ನಡಿಗೆಯ ಮನಸುಗಳ ಜಾತ್ರೆ ಇನ್ನೊಂದು ಕಡೆ, ನಾಚಿಕೆಯನ್ನ ಬದಿಗಿಟ್ಟು ಕೈ ಮುಗಿದು ಬೇಡುವವರ ಜಾತ್ರೆಯೂ ಇನ್ನೊಂದು ಕಡೆ. ಕೆಲವರ ಕಣ್ಣುಗಳು, ಕೆಲವರ ಚೀಲಗಳು, ಕೆಲವರ ಮನಸ್ಸುಗಳು ತುಂಬಿಕೊಂಡಿದೆ. ಜಾತ್ರೆಯ ಉದ್ದೇಶ ಹಲವು ಜನರನ್ನ ತಲುಪುವುದು ಅಷ್ಟೇ. ತಲುಪಿದೆ ಒಬ್ಬೊಬ್ಬರನ್ನು ಒಂದೊಂದು ರೀತಿಯಲ್ಲಿ ರೂಪದಲ್ಲಿ ತಲುಪಿದೆ. ಬೆಳಕಿನ ನಡುವೆ ಕನಸು ತುಂಬಿದ ಕಣ್ಣುಗಳು ಅಲ್ಲೇ ಓಡಾಡುತ್ತಿದ್ದಾವೆ. ಆ ಕಣ್ಣುಗಳು ಕೆಲವು ದಿನದಲ್ಲಿ ದೊಡ್ಡ ದೇಶವನ್ನೇ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಬಹುದು. ಆಸೆಗಳನ್ನು ಅವುಚಿಟ್ಟು ಮುಂದೆ ಸಾಗಿದ ಮನಸುಗಳು ಕೂಡ ಒಂದು ದಿನ ಬದಲಾಗಬಹುದು ಅನ್ನುವ ಯೋಚನೆಯಲ್ಲಿ ಕಾಯುತ್ತಿದ್ದಾವೆ. ಒಟ್ಟಿನಲ್ಲಿ ಜಾತ್ರೆ ನಡೆಯುವ ಸ್ಥಳ ಒಂದೇ ಕಡೆಯಾದರೂ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣುತ್ತಿದೆ. ಅವಶ್ಯಕತೆ, ಅಗತ್ಯ, ಆಸೆ, ಕನಸು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ