ಸ್ಟೇಟಸ್ ಕತೆಗಳು (ಭಾಗ ೮೨೧)- ಕ್ಯಾಲೆಂಡರ್

ಸ್ಟೇಟಸ್ ಕತೆಗಳು (ಭಾಗ ೮೨೧)- ಕ್ಯಾಲೆಂಡರ್

ಗೋಡೆಯ ಮೇಲೆ ನೇತು ಬಿದ್ದ ಕ್ಯಾಲೆಂಡರ್ ಗೆ ಅಷ್ಟೇನೂ ಬೇಸರವಿಲ್ಲ. ಇನ್ನೇನು ಕೆಲವೇ ದಿನದಲ್ಲಿ ತನ್ನ ಆಯಸ್ಸು ಕಳೆದು ಹೋಗುತ್ತೆ. ಇಷ್ಟು ದಿನದವರೆಗೂ ಜನ ತನ್ನನ್ನು ನೋಡಿ ತಮ್ಮ ಮುಂದಿನ ದಿನಗಳನ್ನ ನಿರ್ಧರಿಸಿದವರು. ಇನ್ನು ಮುಂದೆ ಅದನ್ನ ಬದಿಗೆ ಸರಿಸಿ ಬಿಡುತ್ತಾರೆ. ಹೊಸದೊಂದನ್ನು ತಂದು ನಿಲ್ಲಿಸಿ ಹಾಕಿಕೊಳ್ಳುತ್ತಾರೆ. ಒಂದು ಚೂರು ಬೇಸರವಿರುವುದು ಕೆಲವರ ಬಗ್ಗೆ. ಕೆಲವರು ನಿಗದಿ ಮಾಡಿದ್ದರು, ನಿರ್ಧಾರವನ್ನೂ ತೆಗೆದುಕೊಂಡಿದ್ದರು. ಆದರೆ ಯಾವುದನ್ನು ಸರಿಯಾಗಿ ಪಾಲಿಸಲೇ ಇಲ್ಲ. ಹಾಗಾಗಿ ಬರೆದಿದ್ದದೆಲ್ಲ ಕ್ಯಾಲೆಂಡರ್ ನ ಸಂಖ್ಯೆ ಒಳಗೆ ಹಾಗೆ ತುಂಬುಕೊಂಡು ಬಿಟ್ಟಿದೆ. ಅಂದುಕೊಂಡ ದಿನಗಳು ಮುಂದುವರೆದು ಕ್ಯಾಲೆಂಡರ್ ಗಳು ಪುಟಗಳು ತಿರುಗಿ ತಿಂಗಳು ಮುಗಿದು ಹೊಸ ಕ್ಯಾಲೆಂಡರ್ ಬಂದರೂ ಕೂಡ ಅವರಲ್ಲಿ ಅಂತಹ ಬದಲಾವಣೆಗಳೇನು ಆಗಲೇ ಇಲ್ಲ. ಇನ್ನು ಕೆಲವರಂತೂ ಅದ್ಭುತವಾದ ಬದಲಾವಣೆಗಳನ್ನು ಕಾಣುತ್ತಾ ಹೋಗಿದ್ದಾರೆ. ಗೋಡೆಯಲ್ಲಿ ನಿಂತ ಕ್ಯಾಲೆಂಡರ್ ಎಲ್ಲ ಬದಲಾವಣೆಗಳನ್ನು ನೋಡುತ್ತಾನೇ ಬಂದಿದೆ. ದಿನ ಮುಗಿದ ಕೂಡಲೇ ಯಾವುದೋ ಮಕ್ಕಳ ಪಠ್ಯಪುಸ್ತಕಕ್ಕೆ ಹೊರ ಕವಚವಾಗಿ ರಕ್ಷಣೆಗೆ ಬಂದು ನಿಂತುಬಿಡುತ್ತದೆ. ತಾನೊಂದು ದಿನ ವ್ಯರ್ಥವಾಗುತ್ತೇನೆ ಅನ್ನುವ ಬೇಸರವೂ ಇಲ್ಲದೆ ಬದುಕುತ್ತಿದೆ. ರೂಪದಲ್ಲೊಂದಷ್ಟು ಬದಲಾವಣೆ ಆಗಿದೆ ವಿನಹ ಒಳಗೆ ತುಂಬಿಸಿಕೊಂಡಿರುವ ವಿಚಾರದಲ್ಲಲ್ಲ. ಗಾಳಿಗೆ ನಿಧಾನವಾಗಿ ಅಲ್ಲಾಡುತ್ತಾ ತನ್ನ ಕೊನೆಯ ಒಂದಷ್ಟು ದಿನಗಳನ್ನು ನೆನಪಿಸಿಕೊಳ್ಳುತ್ತಾ ಇದ್ದಷ್ಟು ದಿನ ಜನರಿಗೆ ಮುಗಿಯುತ್ತಿರುವ ಕಾಲನ ಕ್ಷಣಿಕತನವನ್ನು ತಿಳಿಸುತ್ತಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ