ಸ್ಟೇಟಸ್ ಕತೆಗಳು (ಭಾಗ ೮೨೨)- ದನಿ

ಸ್ಟೇಟಸ್ ಕತೆಗಳು (ಭಾಗ ೮೨೨)- ದನಿ

ಕಣ್ಣುಗಳು ಆಸೆಗಳನ್ನ ಇನ್ನಷ್ಟು ಹೆಚ್ಚಿಸಿ ಮನಸ್ಸಿನೊಳಗೆ ಸಂದೇಶಗಳನ್ನು ರವಾನಿಸುತ್ತಿದೆ. ಅಲ್ಲಿ ದಾರಿಯ ಬದಿಯಲ್ಲಿ ಇಟ್ಟ ವಿವಿಧ ರೀತಿಯ ತಿಂಡಿಗಳು, ನಾಲಗೆಗೆ ಇಷ್ಟವಾಗಿ ಹೊಟ್ಟೆ ಒಳಗೆ ಸೇರಿದರೆ ಅದೇನು ಖುಷಿ ಸಿಗಬಹುದು ಅನ್ನೋದು ಒಂದು ಕಡೆ, ಕಾಲಿಗೆ ಎಷ್ಟು ಅಂತ ನೋವು ಕೊಡುತ್ತೀಯಾ ವೇಗವಾಗಿ ಸಾಗುವ ಬಸ್ಸನ್ನೇರಿದರೆ ಆದಷ್ಟು ಬೇಗ ಮನೆ ತಲುಪಬಹುದು, ದೇಹಕ್ಕೆ ಧರಿಸುವ ಬಣ್ಣ ಬಣ್ಣದ ಬಟ್ಟೆಗಳು, ಕೈಯಲ್ಲಿ ಹಿಡಿಯಬೇಕಾದ ಅದ್ಭುತವಾದ ಜಂಗಮವಾಣಿಗಳು, ಎಲ್ಲವೂ ವೈವಿಧ್ಯಮಯವಾದದ್ದನ್ನ ಕಣ್ಣಿಗೆ ಅಲ್ಲಲ್ಲಿ ತೋರಿಸುತ್ತಾ ಮನಸ್ಸಿನೊಳಗಿನ ಬದಲಾವಣೆಯನ್ನು ತರುವುದಕ್ಕೆ ಬಯಸ್ತಾ ಇದೆ. ಆದರೆ ಎದೆಯ ಹೊರಗಿನಿಂದ ಗಟ್ಟಿಯಾಗಿ ಕುಳಿತ ಕಿಸೆಗೆ ಮಾತ್ರ ಗೊತ್ತು ತನ್ನ ಈ ದಿನದ ಬದುಕಿನ ಅವಶ್ಯಕತೆ ಏನು ಅನ್ನೋದು. ನಾಲಗೆಯ, ಕಣ್ಣಿನ, ಕಿವಿಯ ಆಸೆಗಳನ್ನೆಲ್ಲಾ ಈಡೇರಿಸುತ್ತಾ ಹೋದರೆ ಮನೆಯೊಳಗೆ ಆಸೆಯಿಂದ ಕಾಯುತ್ತಿರುವ ಕಣ್ಣುಗಳಿಗೆ ಹಸಿವಿನಿಂದ ಕಾಯುತ್ತಿರುವ ಹೊಟ್ಟೆಗಳಿಗೆ ಒಂದಿನಿತೂ, ನೀಡದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಅನ್ನುವ ಭಯವು ಇವೆಲ್ಲಕ್ಕಿಂತಲೂ ದೊಡ್ಡದಾಗಿದೆ. ಹಾಗಾಗಿ ಎದೆಯ ಪಕ್ಕದಲ್ಲಿದ್ದು ಬದುಕಿನ ಜಾಗೃತಿಯನ್ನು ಆಗಾಗ ಮಾಡುತ್ತಿದೆ. ಕಿಸೆ ಹೊಲಿಯುವವನಿಗೂ ಗೊತ್ತಿತ್ತು ಅದಕ್ಕೂ ದುಡ್ಡಿನ ದನಿ ಎದೆಗೂ ಕೇಳಬೇಕು ಅನ್ನೋದು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ