ಸ್ಟೇಟಸ್ ಕತೆಗಳು (ಭಾಗ ೮೨೪)- ಆಲೋಚನೆ

ಅಲ್ಲಿ ಹಾಕಿರುವ ದೊಡ್ಡ ಗಡಿಗಳ ನಡುವೆ ಹಕ್ಕಿಗಳು ಹಾರುತಿವೆ. ಹಕ್ಕಿಗಳಿಗೆ ಯಾರೂ ಕೂಡ ಗಡಿಯ ಬಂಧನವನ್ನ ನೀಡಿಲ್ಲ. ಅವುಗಳು ಆಹಾರವನ್ನು ಅರಸುತ್ತ ಅತ್ತಿಂದಿತ್ತ ಹಾರುತ್ತಾ ಚಲಿಸುತ್ತಿವೆ. ಕಾಡಿಗೋ ನಾಡಿಗೋ ಚಲಿಸುತ್ತಾ ತಮ್ಮದೇ ಊರುಗಳಲ್ಲಿ ನೆಮ್ಮದಿಯಾಗಿ ಬದುಕಿವೆ. ಅವುಗಳ ನಡುವೆ ಭಾಷೆಗಳಿಗೆ ಸೀಮಿತವಾದ ಚೌಕಟ್ಟಿರುವ ಹಾಗೆ, ಬಣ್ಣಗಳಿಗೆ ಸೀಮಿತವಾದಂತಹ ಗುಂಪುಗಳಿಲ್ಲ. ಆಹಾರವನ್ನು ಅರಸುತ್ತ ತಮಗಿಷ್ಟ ಬಂದ ದಿಕ್ಕಿಗೆ ಚಲಿಸಿ ಆಹಾರವನ್ನು ಸಂಗ್ರಹಿಸಿ ಮತ್ತೆ ಗೂಡಿನೊಳಕ್ಕೆ ಪಯಣ ಬೆಳೆಸುತ್ತದೆ. ಹಕ್ಕಿಗಳಿಗೆ ಒಂದು ದಿನವೂ ಅರ್ಥವಾಗಿಲ್ಲ? ಭಾಷೆಗೆ? ನೀರಿಗೆ? ಊರಿಗೋಸ್ಕರ ಮನೆಯ ಅಂಗಳಕ್ಕೆ ಹಾಕಿದ ಬೇಲಿಗೊಸ್ಕರ ಯಾಕೆ ಜಗಳವಾಗುತ್ತಿದೆ ಎನ್ನುವುದು.ಬದುಕುವುದಕ್ಕೆ ಬೇಕಾದ ನೆಲವಿದ್ದಾಗ ಎರಡು ಇಂಚುಗಳ ಜಾಗಕ್ಕೆ ಪ್ರಾಣ ಕಳೆದುಕೊಂಡು ಜೀವನ ಜೀವನಪರ್ಯಂತ ಶಿಕ್ಷೆ ಅನುಭವಿಸಿದರು ಕೂಡ ಬುದ್ಧಿ ಬಾರದ ಇವರ ಕಂಡು ಹಕ್ಕಿಗಳು ಒಳಗೊಳಗೆ ನಗುತಿವೆ. ನಮಗೆ ವಿವೇಚನೆ ಕೊಡದೆ ಇದ್ದದ್ದೇ ಒಳ್ಳೆದಾಯಿತು. ನಮ್ಮೊಳಗೆ ಭೇದ ಭಾವವನ್ನ ಹುಟ್ಟು ಹಾಕದೆ ಇದ್ದದ್ದೇ ಒಳ್ಳೆಯದಾಯಿತು. ಮಾತನಾಡುವ ಶಕ್ತಿಯನ್ನು ನೀಡದೇ ಇದ್ದದ್ದೇ ಒಳ್ಳೆಯದಾಯಿತು ನಾವು ನಮ್ಮದೇ ರೀತಿಯಲ್ಲಿ ಸ್ವಂತ ಆಲೋಚನೆಯಿಂದ ಇಂದು ನಾಳೆಗಳ ನಡುವೆ ನೆಮ್ಮದಿಯಲ್ಲಿ ಬದುಕಿದ್ದೇವೆ. ಹಾಗಾಗಿ ದಿನವೂ ಭಗವಂತನಲ್ಲಿ ಬೇಡಿಕೊಳ್ಳುವುದಿಷ್ಟೇ ನಾವು ಮುಂದಿನ ಜನ್ಮವು ಹಕ್ಕಿಗಳಾಗಿಯೇ ಹುಟ್ಟುತ್ತೇವೆ ಮನುಷ್ಯರಾಗಿ ಅಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ