ಸ್ಟೇಟಸ್ ಕತೆಗಳು (ಭಾಗ ೮೨೭)- ದಾರಿ
ಹಾಗೆಯೇ ಕುಳಿತಿದ್ದವಳ ಪಾದದವನ್ನ ಯಾರೋ ಮುಟ್ಟಿದಂತಾಯಿತು. ಇಳಿ ಸಂಜೆ ಹೊತ್ತಲ್ಲಿ ನನ್ನ ಪಾದವನ್ನು ಮುಟ್ಟುತ್ತಿರುವವರು ಯಾರು? ಹಾಗೆ ಕೆಳಗೆ ನೋಡಿದರೆ ಪುಟ್ಟ ಬೆಕ್ಕಿನ ಮರಿ. ಆಗಷ್ಟೇ ಬಿಡುತ್ತಿರುವ ಪಿಳಿಪಿಳಿ ಕಣ್ಣುಗಳು, ಮುದ್ದಾದ ತನ್ನ ಕೈಯಿಂದ ನನ್ನ ಪಾದವನ್ನು ಮುಟ್ಟುತ್ತಾ ಗೆಜ್ಜೆಯನ್ನ ಮೃದುವಾಗಿ ಅಪ್ಪಿ ನನ್ನನ್ನೇ ನೋಡುತ್ತಿತ್ತು. ಅದು ನನ್ನನ್ನೇ ಹುಡುಕಿಕೊಂಡು ಬಂದಿತ್ತು ನನ್ನಲ್ಲಿ ಏನೋ ಹೇಳುವುದಿತ್ತೋ ಗೊತ್ತಾಗುತ್ತಿಲ್ಲ. ಹಾಗೆಯೇ ಮುದ್ದಿನಿಂದ ಎತ್ತಿ ನನ್ನ ಮುಖದ ಬಳಿ ತಂದೆ ಏನೋ ಮಾತನಾಡುವುದಕ್ಕೆ ಪ್ರಯತ್ನಪಡ್ತಾ ಇತ್ತು. ಅದರ ಭಾವಗಳು ನನ್ನೊಳಗೆ ಪುಟ್ಟ ಪುಳಕವನ್ನೇ ಉಂಟು ಮಾಡಿದವು. ಅದನ್ನ ಹಾಗೆ ಅಪ್ಪಿ ಹಿಡಿದು ಅದರ ಮಾತನ್ನು ಕೇಳುವುದಕ್ಕೆ ಪ್ರಯತ್ನಪಟ್ಟೆ. ಎದೆ ಬಡಿತ ಜೋರಾಗಿತ್ತು. ಮೈಯಲ್ಲಿ ಒಂದು ಸಣ್ಣ ನಡುಕ. ನನಗೊಂದು ಬದುಕುವುದಕ್ಕೆ ಸ್ಥಳ ನೀಡು ಅನ್ನುವ ಬೇಡಿಕೆ ಅದರೊಳಗಿತ್ತು ಅನಿಸುತ್ತದೆ. ಆದರೂ ಅದನ್ನ ಕರೆದುಕೊಂಡು ಹೋಗುವುದಾದರೂ ಎಲ್ಲಿಗೆ ಅನ್ನುವ ಯೋಚನೆ ಮತ್ತೆ ಮತ್ತೆ ಕಾಡುವುದಕ್ಕೆ ಪ್ರಾರಂಭವಾಯಿತು. ಹೆದರಿಕೆಯಿಂದ ಅಲ್ಲೇ ಪಕ್ಕದ ಪಕ್ಕದಲ್ಲಿ ಬಿಟ್ಟು ಮತ್ತೆ ದೂರದಲ್ಲಿ ನಿಂತೆ. ತನ್ನ ದೈನ್ಯ ಕಣ್ಣುಗಳಿಂದ ನನ್ನನ್ನೇ ನೋಡುತ್ತಾ ನನಗೊಂದು ಬದುಕಿಗೆ ದಾರಿ ತೋರಿಸು ಅನ್ನುವ ಪ್ರೀತಿಯ ಭಾವ ಅದರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಹೊರಡುವುದಕ್ಕೆ ಮನಸ್ಸಾಗದೆ ಹಾಗೆ ಎತ್ತಿ ತಂದು ಮನೆಯಲ್ಲಿಟ್ಟೆ. ಮನೆಯೊಳಗೊಂದಿಷ್ಟು ಬೈಗುಳಗಳ ಸುರಿಮಳೆಯೂ ಆಯಿತು. ನಾನು ಮನೆಯಿಂದ ಹೊರಟ ಮೇಲೆ ಈ ಬೆಕ್ಕಿಗೆ ಮನೆಯವರ ಬೈಗುಳ ಹೆಚ್ಚಾಗಬಹುದು ಅನ್ನೋ ಕಾರಣಕ್ಕೆ ಪರಿಚಯಸ್ಥರ ಬಳಿ ಕೇಳಿ ಬೆಕ್ಕನ್ನ ಮುದ್ದಿನಿಂದ ಪ್ರೀತಿಸುವ ಪಕ್ಕದ ಮನೆಯವರಿಗೆ ನೀಡಿದೆ. ಅಲ್ಲಿ ಅವರ ಜೊತೆ ಆಡುತ್ತಾ ಬದುಕಿಗೆ ದಾರಿ ಸಿಕ್ಕಿದ್ದಕ್ಕೆ ಜಗಲಿಯಲ್ಲಿ ಕುಳಿತು ನನ್ನನ್ನೇ ನೋಡುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡ ನಗುತ್ತಾ ನಿಂತಿತ್ತು. ಆ ದಿನ ರಾತ್ರಿ ನನಗೊಂದು ನೆಮ್ಮದಿಯ ನಿದ್ದೆಯು ಬಂದಿತ್ತು
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ