ಸ್ಟೇಟಸ್ ಕತೆಗಳು (ಭಾಗ ೮೨೮)- ಕಾಲ

ಸ್ಟೇಟಸ್ ಕತೆಗಳು (ಭಾಗ ೮೨೮)- ಕಾಲ

ಸಾವಿನ ದಾರಿಯನ್ನ ಆತ ಆಯ್ಕೆ ಮಾಡಿಕೊಂಡಿದ್ದ. ಆ ಕ್ಷಣದಲ್ಲಿ ತಾನು ನಂಬಿದವರು ಜೊತೆಗಿಲ್ಲ ಅನ್ನುವ ಭಾವವೇ ಅವನನ್ನ ಕಾಡಿತ್ತು ಕಾಣುತ್ತೆ. ಕೈಗೆ ಸಿಕ್ಕ ದ್ರಾವಣವನ್ನೇ ಕುಡಿದು ಬಿಟ್ಟು ಒದ್ದಾಡುತ್ತಿದ್ದವನನ್ನು ಗೆಳೆಯರು ಆಸ್ಪತ್ರೆ ಸೇರಿಸಿದರು. ಅಲ್ಲಿ ಆತನಿಗೆ ಬದುಕಿನ ಇನ್ನೊಂದು ಮುಖಃ ದರ್ಶನವಾಯಿತು. ತನ್ನವರು ಯಾರು ತನ್ನ ಬದುಕಿನ ಅವಶ್ಯಕತೆ ಎಷ್ಟಿದೆ. ತನ್ನ ಉಸಿರು ನಿಂತ ಮೇಲೆ ಮನೆಯ ಸ್ಥಿತಿ ಏನು ? ಸಾವಿನ ಕೊನೆಯ ಕ್ಷಣದ ತೀವ್ರ ಯಾತನೆ ಹೇಗಿರುತ್ತದೆ.ಎಲ್ಲವೂ ಅರ್ಥವಾಗಿ ಬದುಕಿಗಾಗಿ ಒದ್ದಾಡುತ್ತಿದ್ದ. ತಾನು ನಂಬಿದವರು ಜೊತೆಗಿಲ್ಲದಿದ್ದರು ತನ್ನನ್ನ ನಂಬಿದ್ದವರು ಜೀವ ಕೊಟ್ಟು ನಿಂತಿದ್ದರು. ಅವರ ಜೇಬುಗಳು ಖಾಲಿಯಾದರೂ ಇವನ ಉಸಿರಿಗಾಗಿ ದುಡಿಮೆ ಮರೆತು ಜೊತೆ ನಿಂತರು. ಅವಶ್ಯಕತೆ , ಅಗತ್ಯ, ಪ್ರೀತಿ, ಪ್ರೇಮ, ಯಾತನೆ, ದಾರಿ, ಬದುಕು, ಉಸಿರು, ಕಣ್ಣೀರು, ಕನಸು, ನಂಬಿಕೆ , ಎಲ್ಲವೂ ಆತನಿಗೆ ಕ್ಷಣದಲ್ಲಿ ಅರ್ಥವಾಯಿತು. ಬದುಕಿನ ರೀತಿ ಬದಲಾಯಿಸುವ ಯೋಚನೆ ಮಾಡಿದ. ಆದರೆ ವೈದ್ಯರ ಕಡೆಯಿಂದ ಉತ್ತರದ ನಿರೀಕ್ಷೆಯಲ್ಲಿದ್ದ. ಕಾಲನ ಕವಡೆಯ ದಾರಿ ಎಳ್ಳಿನ ಕಡೆಗೋ ಜೀರಿಗೆ ಕಡೆಗೋ ಕಾಯಬೇಕು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ