ಸ್ಟೇಟಸ್ ಕತೆಗಳು (ಭಾಗ ೮೩೦)- ತಾಳಿ
ದಾರಿಯಲ್ಲಿ ಕಂಡವರ ಮಾತುಗಳು ಬದುಕಿನ ಹೊಸ ದಾರಿಯನ್ನೇ ತೋರಿಸುತ್ತವೆ. ನಡೆವ ದಾರಿಯಲ್ಲಿ ನಿಂತಿದ್ದವರು ಒಬ್ಬರು ಹಾಗೆಯೇ ತಾವು ಧರಿಸಿದ್ದ ತಾಳಿಯನ್ನು ಕಣ್ಣಿಗೊತ್ತಿಕೊಳ್ಳುತ್ತಿದ್ದರು. ಅದ್ಯಾಕೆ ಹಾಗೆ ಅನ್ನೋದನ್ನ ಕೇಳಿದ್ದಕ್ಕೆ "ನೋಡಿ ಸರ್ ತುಂಬಾ ಹಣ ಸುರಿದು ಮದುವೆ ಮಾಡುವಷ್ಟು ಸ್ಥಿತಿವಂತರು ನಮ್ಮ ಮನೆಯಲ್ಲಿ ಯಾರು ಇರಲಿಲ್ಲ. ಆಗ ನನ್ನ ಮದುವೆಯಾಗಬೇಕು ಅನ್ನೋ ಕಾರಣಕ್ಕೆ ತಂದೆ ಒಂದು ಮನೆಯಲ್ಲಿ ಜೀತದ ಕೆಲಸ ಮಾಡಿದರು. ಅಣ್ಣ-ತಮ್ಮಂದಿರು ತಮ್ಮ ಶಿಕ್ಷಣವನ್ನು ನಿಲ್ಲಿಸಿ ಕೆಲಸದ ಕಡೆಗೆ ಮುಖ ಮಾಡಿದರು. ತಾವು ದುಡಿದ ಅಷ್ಟೂ ಹಣವನ್ನ ಶೇಖರಿಸಿ ಇನ್ನೊಂದಷ್ಟು ಸಾಲ ಮಾಡಿ ಮದುವೆಯನ್ನು ಮಾಡಿಬಿಟ್ರು. ಅವರು ದುಡಿದ ಪ್ರತಿ ಬೆವರ ಹನಿಯ ಲೆಕ್ಕವು ನಾನು ಧರಿಸಿದ ತಾಳಿಯ ಕರಿಮಣಿಯಲ್ಲಿದೆ .ಹಾಗಾಗಿ ಪ್ರತಿದಿನವೂ ಅವರ ಮುಂದೆ ಕಾಲಿಗೆ ನಮಸ್ಕರಿಸಿ ಕೊಳ್ಳುವುದಕ್ಕಾಗುವುದಿಲ್ಲ ನೋಡಿ ಅದಕ್ಕೆ ಅವರ ನೆನಪಿನಿಂದ ಅವರನ್ನೇ ಯೋಚಿಸಿ ತಾಳಿಯನ್ನ ಕಣ್ಣಿಗೊತ್ತಿಕೊಳ್ಳುತ್ತಿದ್ದೇನೆ. ಆ ಕಾರಣದಿಂದಲಾದರೂ ನಾನು ಅವರನ್ನು ಪ್ರತಿದಿನವೂ ನೆನೆದುಕೊಳ್ಳುವಂತೆ ದಿನಚರಿಯನ್ನು ರೂಪಿಸಿದ್ದೇನೆ. ಮರೆತು ಸಾಗಿ ಬಿಡಬಾರದು ನನ್ನ ಇಂದಿನ ಬದುಕಿಗೆ ಅವರೇ ಕಾರಣ ಅಲ್ವಾ? ದೊಡ್ಡ ಮನಸ್ಸಿನ ದೊಡ್ಡವರ ಮಾತು ಬದುಕನ್ನು ನೋಡಬೇಕಾದ ಹೊಸ ಬಗೆಯನ್ನು ತಿಳಿಸಿಕೊಟ್ಟಿತು.. ಹಾಗೇ ಮುಂದೆ ಸಾಗಿ ಬಿಟ್ಟೆ ಹೊಸ ಬದುಕಿನ ಪಾಠವ ಹುಡುಕುತ್ತಾ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ