ಸ್ಟೇಟಸ್ ಕತೆಗಳು (ಭಾಗ ೮೩೧)- ನಿರೀಕ್ಷೆ

ಸ್ಟೇಟಸ್ ಕತೆಗಳು (ಭಾಗ ೮೩೧)- ನಿರೀಕ್ಷೆ

ಸೂರ್ಯನೇನೊ ಮತ್ತೆ  ಮೂಡುತ್ತಾನೇನೋ ನಿಜ. ಆತನ ದಿನಚರಿ ಹುಟ್ಟಿನಿಂದ ಬೆಳಗಿನಿಂದ ಸಂಜೆಯವರೆಗೆ ಮುಂದುವರೆದು ಮತ್ತೆ ಮರುದಿನದ ಬೆಳಗೆ ಕಾಯಕವನ್ನು ಆರಂಭಿಸುತ್ತಾನೆ. ಆದರೆ ಅವರು ಹಾಗಲ್ವಲ್ಲ. ಇಷ್ಟು ದಿನದವರೆಗೆ ದೊಡ್ಡ ಜವಾಬ್ದಾರಿಯನ್ನು ಹೊತ್ತು ಸರಿ ತಪ್ಪುಗಳನ್ನ ಹೇಳಿ, ತಾಯಿಯ ಸ್ಥಾನದಲ್ಲಿ ನಿಂತು ತಿದ್ದಿದವರು. ಪ್ರತಿಯೊಬ್ಬರ ಮನಸ್ಸಿನಾಳ ಕೇಳಿ ಭಾವನೆಗಳನ್ನು ಅರ್ಥೈಸಿಕೊಂಡು ಬದುಕಿನ ದಾರಿಗೆ ಸ್ಪೂರ್ತಿಯಾದವರು. ತನ್ನ ಕನಸುಗಳ ರಾಶಿ ಮೂಟೆಗಳನ್ನ ಹಾಗೇ ಬದಿಗೊತ್ತಿ ಹಲವರ ಕನಸುಗಳಿಗೆ ನೀರೆರೆದು ದೊಡ್ಡ ಮರವಾಗುವವರೆಗೆ ಬೇಕಾದ ಎಲ್ಲ ಪೋಷಕಾಂಶಗಳನ್ನು ನೀಡುತ್ತಾ ಬದಿಯಲ್ಲಿ ಸುಮ್ಮನೆ ನಿಂತವರು. ಖಾಲಿ ಕೈಯಲ್ಲಿ ತೆರಳಿದವರಿಗೆ ಬೊಗಸೆ ತುಂಬಾ ಭವಿಷ್ಯದ ಹೆಮ್ಮರದಂತಹ ಆಲೋಚನೆಗಳಿಗೆ ಬೀಜಗಳನ್ನ ನೀಡಿಯೇ ಹೊರ ಕಳುಹಿಸಿದವರು. ಇನ್ನು ಮುಂದೆ ಪ್ರತಿದಿನ ನೋಡುತ್ತಿದ್ದಲ್ಲಿ ನಿಮ್ಮನ್ನ ಕಾಣುವುದಕ್ಕೆ ಆಗುವುದಿಲ್ಲ ಅನ್ನುವ ಬೇಸರವಿದೆ. ಆದರೂ ಖುಷಿ ಇದೆ. ಮಿನುಗುವ ನಕ್ಷತ್ರಗಳೆಲ್ಲ ಇನ್ನೊಂದಷ್ಟು ಎತ್ತರಕ್ಕೇರಿದರೆ ಆ ಬೆಳಕನ್ನು ಹೆಚ್ಚು ಜನರು ಕಾಣುವಂತಾಗಬಹುದು. ಅದಕ್ಕಾಗಿ ಹೊಸ ಅವಕಾಶಗಳ ಕಡೆಗೆ ನಡೆದಿದ್ದಾರೆ. ಹಾರೈಸುವುದನ್ನ ಬಿಟ್ಟು ಇನ್ನೇನು ಮಾಡೋದಕ್ಕೆ ಆಗೋದಿಲ್ಲ. ಒಳಿತಾಗಲಿ ನೆನಪಿರಲಿ, ಹೀಗೆಂದು ಪತ್ರ ಬರೆದಿಟ್ಟವನು ತಲುಪಿಸುವವರಿಗೆ ತಲುಪಿಸಲಾಗದೆ ಒದ್ದಾಡುತ್ತಿದ್ದಾನೆ... ನಿರೀಕ್ಷೆ ಜಾರಿಯಲ್ಲಿದೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ