ಸ್ಟೇಟಸ್ ಕತೆಗಳು (ಭಾಗ ೮೩) - ಮನೆಯೋ, ಮನವೋ?

ಸ್ಟೇಟಸ್ ಕತೆಗಳು (ಭಾಗ ೮೩) - ಮನೆಯೋ, ಮನವೋ?

ನಾನು ತುಂಬಾ ಒಳ್ಳೆಯವನು? ನಮ್ಮ ಮನೆಯ ಕಿಟಕಿಯಿಂದ ಎದುರುಮನೆಯ ಕೋಣೆಯೊಂದು ಕಾಣುತ್ತದೆ. ಅದನ್ನು ನೋಡಿದಾಗ ಅದು ಮಲಗುವ ಕೋಣೆಯೂ ಅಲ್ಲಾ, ಅಡುಗೆ ಕೋಣೆಯೂ ಅಲ್ಲಾ, ಇರಲಿ ಯಾವುದೋ ಒಂದು ಕೊಠಡಿ.  ಯಾರಾದರೂ ಕಾಣುತ್ತಾರಾ ಅಂತ ಇಣುಕುತ್ತೇನೆ. ನಾನು ತುಂಬಾ ಒಳ್ಳೆಯವನು ಅಲ್ವಾ, ಆ ಕೋಣೆಯಲ್ಲಿ ಬೆಳಕಿದ್ದರೆ ಮಾತ್ರ ನೋಡುತ್ತೇನೆ. ಕೊಣೆಯೊಳಗಿಂದ ಒಬ್ಬ ಹುಡುಗಿ ಹಾದುಹೋದಳು ಅವಳ ಹಿಂದೆ ಹಾದುಹೋದ ಯುವಕ ಕೆಲ ಕ್ಷಣದಲ್ಲಿ ಭಯದಲ್ಲಿ ಹಿಂತಿರುಗಿದ ಆತನ ಬಟ್ಟೆಯಲ್ಲಿ ಕೆಂಪಿನ ಕಲೆ ಕಾಣುತ್ತಿತ್ತು. ಅದಾದ ಕೆಲವೇ ಗಂಟೆಗಳಲ್ಲಿ ಇನ್ನಿಬ್ಬರು ಕಳ್ಳರ ತರಹ ನುಗ್ಗಿ ಹಿಂತಿರುಗಿದಾಗ ಅವರ ಬಟ್ಟೆಯೂ ಕೆಂಪಿನ ಬಣ್ಣಕ್ಕೆ ತಿರುಗಿತ್ತು. ಗಂಟೆಗಳ ತರುವಾಯ ಪೋಲೀಸ್  ಇಬ್ಬರೂ ಒಳ ಹೋಗಿ ಕಿಟಕಿಯ ಪರದೆ ಹಾಕಿದರು. ಮತ್ತೆ ತೆರೆದಾಗ ಮೊದಲು ಓಡಿದವ ಪುಸ್ತಕ ಓದುತ್ತಿದ್ದ. ಆಕೆ ಅವನ ತೊಡೆ ಮೇಲೆ ಮಲಗಿದ್ದಳು. ಇದರ ಆರಂಭ ಏನೋ,ಅಂತ್ಯಾ ಏನೋ ಒಂದು ಅರಿವಾಗುತ್ತಿಲ್ಲ. ನಾನೇ ಅನಗತ್ಯವಾಗಿ ಜೋಡಿಸಿ ಕಥೆ ಕಟ್ಟೋದ್ಯಾಕೆ? 

ಘಟನೆಗಳು ತಾಳಿಕೆಯಾಗಿ ಕಥೆಯಾದದ್ದು ಮನೆಯೊಳಗೋ… ನನ್ನ ಮನದೊಳಗೋ…?

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ