ಸ್ಟೇಟಸ್ ಕತೆಗಳು (ಭಾಗ ೮೪೧)- ಕಷ್ಟ

ಸ್ಟೇಟಸ್ ಕತೆಗಳು (ಭಾಗ ೮೪೧)- ಕಷ್ಟ

ಅವನಿಗೆ ಆ ಊರು ಹೊಸದು. ಅಂದರೆ ಆ ಊರಿನ ಆಚಾರ ವಿಚಾರ ಸಂಪ್ರದಾಯಗಳ ಬಗ್ಗೆ ಒಂದಿನಿತೂ ಆತನಿಗೆ ಅರಿವಿಲ್ಲ. ಯಾಕೆಂದರೆ ಆತ ಇಷ್ಟು ದಿನ ಕಾಡಿನೊಳಗೆ ಬದುಕಿದವ. ಅಲ್ಲೇ  ಹಸಿರು ನಡುವೆ ಓಡಾಡುತ್ತಿದ್ದವ ಕಾಂಕ್ರೀಟಿನ ಊರಿಗೆ ಕಟ್ಟಡಗಳ ಬೀಡಿಗೆ ಬಂದು ಇಳಿದು ಬಿಟ್ಟ. ಅಲ್ಲಿನವರ ಮಾತುಕತೆ ಗೊತ್ತಿಲ್ಲ. ಊರಿನಲ್ಲಿ ಆತನಿಗೆ ಉಸಿರು ಕಟ್ಟುವುದಕ್ಕೆ ಆರಂಭವಾಯಿತು. ಇಲ್ಲಿಯ ಜನರ ನಡೆ-ನುಡಿಗಳನ್ನು ನೋಡಿ ತಾನು ಯಾವುದು ಪರಿಚಯವಿಲ್ಲದ ಲೋಕಕ್ಕೆ ಬಂದಂತೆ ಅನಿಸೋದಕ್ಕೆ ಪ್ರಾರಂಭ ಆಯ್ತು. ಜೊತೆಗೆ ಕೈ ಹಿಡಿದವರು ಹೆಗಲ ಮೇಲೆ ಹೆಗಲು ಕೊಟ್ಟು ಮುಂದುವರೆದವರು ಕ್ಷಣದ ವಿಚಾರಕ್ಕೆ ಕೋಪಗಳನ್ನ ತಾಳಿಕೊಂಡು ಒಬ್ಬರ ವಿರುದ್ಧ ದ್ವೇಷವನ್ನು ತಾಳುತ್ತಾರೆ, ಯಾವನೋ ಒಬ್ಬ ಹೇಳಿದ ಮಾತಿಗೆ ಜೊತೆಗಿದ್ಸವರನ್ನ ಬದುಕುತ್ತಿರುವವರನ್ನೇ ಸಾಯಿಸಲು ಮುಂದೆ ಬರುತ್ತಾರೆ, ಬದುಕಿನ ಅನಿವಾರ್ಯತೆಗೆ ಇಲ್ಲದ ಜಾತಿಯ ಸರಪಳಿಗಳು ಎದೆಯ ಮೇಲೆ ಹೊತ್ತುಕೊಂಡು ತಿರುಗಾಡುತ್ತಿರುತ್ತಾರೆ. ಕೈ ಹಿಡಿದು ತಂದೆ ತಾಯಿಯರ ನಡೆಸುವುದನ್ನು ಬಿಟ್ಟು ಮೊಬೈಲ್ ಒಂದನ್ನು ಹಿಡಿದುಕೊಂಡಿದ್ದಾರೆ ಗೋಡೆಗಳು ಭದ್ರವಾಗಿ ಅಂತಸ್ತುಗಳು ಏರುತ್ತಿದ್ದರೂ, ಮನಸ್ಸುಗಳು ಗಟ್ಟಿಯಾಗದೆ ಬಿರುಕು ಬಿಡುತ್ತಿವೆ. ಕೊಳಚೆ ನೀರುಗಳು ಮನೆ ಮುಂದೆ ಹರಿದರೂ ಸರಿಯಾದ ಸವಲತ್ತು ಸಿಗದೇ ಇದ್ದರೂ ಅದ್ಯಾವುದನ್ನು ಪ್ರಶ್ನಿಸದೆ ಸುಮ್ಮನೆ ನಿಂತುಬಿಟ್ಟಿದ್ದಾರೆ, ಇವೆಲ್ಲವನ್ನೂ ಕಂಡು ಆತನಿಗೆ ಈ ಊರಿನ ಸಹವಾಸವೇ ಬೇಡ ಮತ್ತೆ ಧರಿಸಿದ ದಿರಿಸುಗಳನ್ನೆಲ್ಲ ತೊರೆದು ಕಾಡಿನುಡುಗೆ ಧರಿಸಿ ಮತ್ತೆ ಕಾಡೊಳಗೆ ಚಲಿಸುವುದಕ್ಕೆ ಮನಸ್ಸು ಮಾಡಿದ್ದಾನೆ ...ಆದರೆ ದಾರಿ ಗೊತ್ತಾಗ್ತಾ ಇಲ್ಲ 

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ