ಸ್ಟೇಟಸ್ ಕತೆಗಳು (ಭಾಗ ೮೪೨)- ಯಾಕೆ?

ಸ್ಟೇಟಸ್ ಕತೆಗಳು (ಭಾಗ ೮೪೨)- ಯಾಕೆ?

ತಲೆಯಲ್ಲಿ ಒಂದಿಷ್ಟು ಯೋಚನೆಗಳು ಬಂದು ವಿವೇಚನೆಗೊಂದು ಅರ್ಥ ಸಿಕ್ಕಿದವು, ನಾನು ಈ ಭೂಮಿಯಲ್ಲಿ ಬದುಕೋದಕ್ಕೆ ಪ್ರಾರಂಭ ಮಾಡಿ ಹಲವು ವರ್ಷಗಳೇ ಕಳೆಯಿತು. ಕಣ್ಣ ಮುಂದೆ ಸಾವಿರಾರು ಘಟನೆಗಳು ನಡೆಯುತ್ತಾ ಇದ್ದರೂ ಉದಾರಣೆಗಳು ದಿನಂಪ್ರತಿ ಕಾಣುತ್ತಿದ್ದರೂ ಕೂಡ ನಾನು ಬದಲಾಗದೆ ಇರುವುದು ಯಾಕೆ? ಎತ್ತರವಾಗಿ ನಿಂತ ಮರ ಆಳಕ್ಕೆ ಬೇರು ಬಿಟ್ಟು ಒಳಗಿನ ಕಲ್ಮಶಗಳನೆಲ್ಲ ಬದಿಗೆ ಸರಿಸಿ ಸತ್ವವನ್ನ ಮಾತ್ರ ಹೀರಿಕೊಂಡು, ಅದೆಷ್ಟೇ ಕಲ್ಲುಗಳು ತನ್ನ ಮೇಲೆ ಬಿದ್ದರೂ ಹೂವು ಹಣ್ಣುಗಳನ್ನ ಕಾಲಕಾಲಕ್ಕೆ ಕೊಡುತ್ತಿರುವುದನ್ನ ನಾನ್ಯಾಕೆ ಅರ್ಥ ಮಾಡಿಕೊಳ್ಳಲಿಲ್ಲ, ಸಂಜೆಯಾದಾಗ ಬಾಡುವ ಹೂವೊಂದು  ಬೆಳಗ್ಗೆಯೇ ಸೂರ್ಯನ ಮೊಗಕ್ಕೆ ಚಂದದಿಂದ ಅರಳಿ ತನ್ನೆಲ್ಲ ಸೌಗಂಧವನ್ನು ಬೀರಿ ಮುದುಡಿ ಹೋಗುವ ಆ ಸೌಂದರ್ಯವನ್ನು ನಾನೇಕೆ ಅರ್ಥಮಾಡಿಕೊಳ್ಳಲಿಲ್ಲ, ಮನೆಯ ಯಜಮಾನ ಕೊಟ್ಟರೂ ಕೊಡದಿದ್ದರೂ ಮನೆ ಅಂಗಳದಲ್ಲಿ ನಿಂತು ನಿಷ್ಠೆಯಿಂದ ಕಾಯುವ ನಾಯಿಯ ಗುಣದಲ್ಲಿ ಒಂದಂಶವೂ ನನಗಿನ್ನು ಅರ್ಥವಾಗಿಲ್ಲ ಯಾಕೆ? ಎಷ್ಟೇ ಎತ್ತರದ ಆಕಾಶದಲ್ಲಿ ಹಾರಾಡಿದರೂ ಕೂಡ ಮತ್ತೆ ಬದುಕುವುದಕ್ಕೆ ನೆಲಕ್ಕೆ ಬಂದು ಇಳಿದು ಕಾಳುಗಳನ್ನು ಹಿಕ್ಕಿ ಕುಟುಂಬಗಳನ್ನ ಕರೆದು ಸಹವರ್ತಿಯಾಗಿ ಬದುಕೋದನ್ನ ನಾನು ಅರ್ಥ ಮಾಡಿಕೊಂಡಿಲ್ಲ, ಯಾಕೆ ಆ ದಿನದ ಕೆಲಸವನ್ನ ಆ ದಿನವೇ ಮುಗಿಸಿ ಅತಿಯಾಸೆ ಪಡದೆ ನೆಮ್ಮದಿಯಾಗಿ ಬದುಕುವ ಜೀವಿಗಳ ಒಂದು ಗುಣವು ನನ್ನ ಕಣ್ಣಿಗೆ ಬಿದ್ದಿಲ್ಲವೆ? ಕಷ್ಟಪಟ್ಟು ನಿಷ್ಠೆಯಿಂದ ಬದುಕುವ ಪ್ರೀತಿಯಿಂದ ಬದುಕುವ ಇರುವೆಯ ಗುಣ ನೋಡದನ್ನ ನಾನು ಮರೆತೇಬಿಟ್ಟೆ? ದೊಡ್ಡವರು ಸಣ್ಣೋರು ಮೇಲು ಕೀಳು ಯಾವುದನ್ನು ನೋಡದೆ ಎಲ್ಲಾ ಕಡೆಗೂ ಹರಿತ ಇದೆಯಲ್ಲ ನೀರು, ಚಲಿಸ್ತಾನೆ ಇದ್ಯಲ್ಲ ಗಾಳಿ ಇದನ್ನ ಮರೆತದ್ದು ಯಾಕೆ? ಶಾಲೆಯ ಪಾಠ ಪುಸ್ತಕದ ಒಳಗಿರುವ ವಿಚಾರಗಳು ಮಾತ್ರ ಬದುಕಿನ ಸತ್ಯಗಳನ್ನು ತಿಳಿಸುತ್ತವೆ ಹಿರಿಯರು ಹೇಳಿಕೊಟ್ಟ ಉಪದೇಶಗಳು ಮಾತ್ರ ಬದುಕಿನ ಸತ್ಯವನ್ನು ತಿಳಿಸಿ ಕೊಡುತ್ತವೆ ಅನ್ನೋದನ್ನೇ ಮಾತ್ರ ನಾನು ನಂಬಿಕೊಂಡು ಬದುಕಿದ್ದಾ?  ಜಗತ್ತು ತೋರಿಸುವ ಬದುಕಿನ ಸತ್ಯವನ್ನು ಅರ್ಥೈಸಿಕೊಂಡು ಕಣ್ಣು ಕಿವಿ ಹೃದಯವನ್ನು ತೆರೆಯದೆ ಬದುಕಿದ್ದದ್ದು ಯಾಕೆ ? ಮತ್ತೆ ಪ್ರಶ್ನೆಗಳು ಕಾಡುತ್ತ ಇವೆ. ಬದುಕಿನ ಅರ್ಹತೆಯನ್ನು ಪಡೆದುಕೊಳ್ಳುವುದಕ್ಕೆ ನಾನಿನ್ನು ಹಲವು ಹೆಜ್ಜೆಗಳನ್ನ ಇಡಬೇಕಾಗಿದೆ ನನ್ನ ಜೊತೆಗೆ ಬರುವವರಿದ್ದರೆ ಹಾಗೆಯೇ ನಡೆದು ಬಿಡಿ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ