ಸ್ಟೇಟಸ್ ಕತೆಗಳು (ಭಾಗ ೮೪೩)- ಮನಸ್ಥಿತಿ

ನಾನು ಮಾಡುವ ಕೆಲಸ, ಓದು ಯಾವುದೂ ಪೂರ್ತಿಯಾಗಲ್ಲ. ನನಗೆ ಸರಿಯಾಗಿ ಅರ್ಥ ಆಗ್ತಾ ಇಲ್ಲ ತುಂಬಾ ದಿನದಿಂದ ಅದರ ಜೊತೆಗೆ ಬದುಕಿದ್ದೇನೆ ಆದರೆ ನಾಳೆ ಏನಾಗುತ್ತೆ, ಅದರ ಪರಿಣಾಮ ಏನು ಅನ್ನೋದು ಕೂಡ ಗೊತ್ತಾಗ್ತಾ ಇಲ್ಲ ಇದು ಯಾಕೆ ಹೀಗೆ? ಈ ಪ್ರಶ್ನೆಯನ್ನ ರಾಮು ರಾಜು ಅಂಕಲ್ ಬಳಿ ಕೇಳಿದ, ಅದಕ್ಕೆ "ನೋಡು ಪುಟ್ಟಾ ನಿನಗೊಂದು ಕಥೆ ಹೇಳುತ್ತೇನೆ ,ಈ ಸಮುದ್ರದಲ್ಲಿ ಮೀನು ಹಿಡಿಯುವರು ಇದ್ದಾರಲ್ಲ ಅವರಿಗೆ ಯಾವಾಗ ಮಳೆ ಬರುತ್ತೆ? ಯಾವ ದಿನ ಮೀನು ಹಿಡಿಯುವುದಕ್ಕೆ ಹೋಗಬೇಕು? ಸಮುದ್ರ ಏನು ಮಾತನಾಡುತ್ತೆ? ಯಾವ ಕ್ಷಣದಲ್ಲಿ ಮೀನು ಹಿಡಿದರೆ ಹೆಚ್ಚು ಸಿಗುತ್ತೆ? ಯಾವಾಗ ಸಮುದ್ರಕ್ಕೆ ಇಳಿಯಬಾರದು? ಯಾವ ಮೀನಿಗೆ ಯಾವ ತರಹದ ಬಲೆ ಬೀಸಬೇಕು? ಎಲ್ಲವೂ ಕೂಡ ತುಂಬಾ ಚೆನ್ನಾಗಿ ಅರಿವಿರುತ್ತೆ. ಇದನ್ನ ಅವರಿಗೆ ಯಾರೋ ಹೇಳಿಕೊಟ್ಟಿದ್ದಾರೆ ಅಂತ ಅಲ್ಲ. ಪ್ರತಿದಿನದ ಅನುಭವ ಅವರಿಗದನ್ನು ಕಳಿಸಿದೆ. ಜೊತೆಗೆ ಅವರು ಆ ಸಮುದ್ರವನ್ನು ತುಂಬಾ ಪ್ರೀತಿಸುತ್ತಾರೆ. ತುಂಬಾ ನಂಬಿದ್ದಾರೆ ಕೂಡ. ನಂಬಿ ಕೆಲಸ ಮಾಡ್ತಾ ಅದನ್ನ ಅರ್ಥೈಸಿಕೊಳ್ಳುತ್ತಾ ಹೋದ ಹಾಗೆ ಅವರಿಗದು ಕರಗತವಾಗುತ್ತಾ ಹೋಗುತ್ತೆ. ನೀನು ಮಾಡುವ ಕೆಲಸವನ್ನು ತುಂಬಾ ಪ್ರೀತಿಯಿಂದ ಅರ್ಥಮಾಡಿಕೋ. ಆಗ ಆ ಕೆಲಸವೇ ನಿನಗೆ ಎಲ್ಲವನ್ನ ತಿಳಿಸಿ ಕೊಡುತ್ತೆ. ಒಲ್ಲದ ಮನಸ್ಥಿತಿಯಲ್ಲಿ ಎಷ್ಟೇ ಶ್ರಮವಹಿಸಿದರೂ ಅದು ನಮ್ಮೊಂದಿಗೆ ಯಾವತ್ತು ಮಾತನಾಡುವುದಿಲ್ಲ. ಮೊದಲು ಮನಸ್ಪೂರ್ತಿಯಾಗಿ ದುಡಿಯೋದಕ್ಕೋ, ಓದುವುದ್ದಕ್ಕೋ ಪ್ರಾರಂಭ ಮಾಡು, ಎಲ್ಲವೂ ಒಳಿತಾಗುತ್ತೆ." ಮಾತು ಕೇಳಿ ಕೆಲಸದ ಕಡೆಗೆ ನಡೆದ. ಮತ್ತೇನಾಗುತ್ತೋ ಅವನ ಬಳಿಯಲ್ಲಿ ಉತ್ತರ ಕೇಳ ಬೇಕಷ್ಟೇ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ