ಸ್ಟೇಟಸ್ ಕತೆಗಳು (ಭಾಗ ೮೪೫)- ಬಾಳೆ ಎಲೆ

ಸ್ಟೇಟಸ್ ಕತೆಗಳು (ಭಾಗ ೮೪೫)- ಬಾಳೆ ಎಲೆ

ಗಿಡದಲ್ಲಿ ಸೊಂಪಾಗಿ ಬೆಳೆದು ಗಾಳಿಗೆ ತನ್ನ ಮೈಯನ್ನು ಒಡ್ಡಿಕೊಂಡು ಆಗಸಕ್ಕೆ ಮುಖ ಮಾಡಿ ಹಾರುತ್ತಿದ್ದ ಆ ಬಾಳೆ ಎಲೆಗಳನ್ನು ಕತ್ತರಿಸಿ ಅಲ್ಲಿಂದ ಕೊಂಡೊಯ್ದರು. ಅದಕ್ಕೆ ಗೊತ್ತಿಲ್ಲ ಎಲ್ಲಿಗೆ ತಾವು ಹೋಗುತ್ತಿದ್ದೇವೆ ಅನ್ನೋದು. ಎಲ್ಲ ಗೆಳೆಯರನ್ನು ಒಟ್ಟು ಸೇರಿಸಿ ಹಾಗೆ ಸಾಗುತ್ತಿರುವಾಗ ಕೆಲವರು ಜೋರಿನ ಗಾಳಿಗೆ ತುಂಡಾಗಿ ಬಿಟ್ಟರು. ಒಬ್ಬೊಬ್ಬರದು ಒಂದೊಂದು ದಿಕ್ಕು. ದೇವಾಲಯಕ್ಕೊಬ್ಬರು, ಊಟದ ಮನೆಗೆ ಒಬ್ಬರು, ಹೋಟೇಲಿಗೊಬ್ಬರು, ಮನೆಗೊಬ್ಬರು ಹೀಗೆ ಎಲ್ಲರ ಕೆಲಸ ಸಂರಕ್ಷಿಸುವುದು. ಎಲ್ಲ ಭಕ್ಷ್ಯ ಭೋಜನಗಳನ್ನು ತನ್ನ ಮೇಲಿಟ್ಟು ಮನುಷ್ಯನ ದೇಹಕ್ಕೆ ಎಲ್ಲವನ್ನು ಕಳುಹಿಸಿ ಕೊಡುತ್ತಿತ್ತು ಯಾವುದೇ ರೀತಿಯ ಮಲಿನವು ಒಳ ಸೇರದಂತೆ. ಆದರೆ ಊಟವಾದ ತಕ್ಷಣ ಬಳಸಿಕೊಂಡ ಎಲೆಯನ್ನು ಕಿಂಚಿತ್ತು ಯೋಚನೆ ಮಾಡದೇ ಮುದ್ದೆ ಮಾಡಿ ಎಸೆಯುತ್ತಿದ್ದರು. ಅಗತ್ಯವಾಗಿದ್ದು ಮುಂದೊಂದು ಕ್ಷಣದಲ್ಲಿ ಪರಿಚಯವೇ ಇಲ್ಲವಾಗಿ ಬಿಟ್ಟಿತ್ತು. ಬೇಸರ ಮಾಡಿಕೊಳ್ಳಲಿಲ್ಲ ತಾನು ಮಾಡಿದ ಕೆಲಸವನ್ನು ಶೃದ್ಧೆಯಿಂದ ನಿರ್ವಹಿಸಿದ್ದೇನೆ ಅನ್ನುವ ನೆಮ್ಮದಿ ಮಾತ್ರ ಅದಕ್ಕಿತ್ತು. ‘ಈ ಕಥೆ ನಿನಗೆ ಯಾಕೆ ಹೇಳ್ತಾ ಇದ್ದೀನಿ ಅಂತ ಅಂದ್ರೆ ನೀನು ಸರಿಯಾಗಿ ಅರ್ಥ ಮಾಡ್ಕೋ. ಪ್ರಸ್ತುತ ಜಗತ್ತಿನಲ್ಲಿ ಬಾಳೆ ಎಲೆಯ ತರಹದ ಬದುಕು ನಿನ್ನದಾಗಬಾರದು ಅನ್ನೋದನ್ನ. ಎರಡೆರಡು ಸಲ ಒತ್ತಿ ಹೇಳಿ ಬೆನ್ನು ತಟ್ಟಿ ವಾಸುದೇವ ಶಾಸ್ತ್ರಿಗಳು ಹಾಗೆಯೇ ಮುಂದೆ ಚಲಿಸಿಬಿಟ್ಟರು... 

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ