ಸ್ಟೇಟಸ್ ಕತೆಗಳು (ಭಾಗ ೮೪೭)- ಹಬ್ಬ - ಭಯ

ಸ್ಟೇಟಸ್ ಕತೆಗಳು (ಭಾಗ ೮೪೭)- ಹಬ್ಬ - ಭಯ

ಹಬ್ಬ ಎಂದರೆ ಅವನಿಗೆ ತುಂಬಾ ಭಯ. ಅದನ್ನು ಸಂಭ್ರಮದಿಂದ ಆಚರಿಸಬೇಕು, ಮನೆಗೊಂದಿಷ್ಟು ಹೊಸ ಮೆರುಗು ಬರಬೇಕು, ಮಕ್ಕಳಿಗೆ ಹೊಸ ಬಟ್ಟೆ ಸಿಗಬೇಕು, ಹೊಟ್ಟೆಗೊಂದು ಇಷ್ಟು ರುಚಿರುಚಿಯಾಗಿ ಆಹಾರ ಒಳಗಿಳಿಯಬೇಕು, ಆದರೆ ಇದೆಲ್ಲವೂ ಸಾಧ್ಯವಾಗುವುದಕ್ಕೆ ತುಂಬಾ ಸಮಯದಿಂದ ಪ್ರಯತ್ನ ಪಟ್ಟರೂ ಆಗ್ತಾ ಇಲ್ಲ. ಪ್ರತಿದಿನದ ದುಡಿಮೆ ಆ ದಿನದ ಕೊನೆಗೆ ಸಾಕಾಗುವುದಿಲ್ಲ. ಅದರಲ್ಲಿ ಈ ಎಲ್ಲಾ ಹೊಸ ಷರತ್ತುಗಳು ಬಂದಾಗ ಬದುಕು ಕಷ್ಟವೆನಿಸುತ್ತದೆ. ಹಬ್ಬವನ್ನು ಆಚರಿಸದೆ ಹಾಗೆ ಬದುಕಿ ಬಿಡಬಹುದು ಆದರೆ ಮಕ್ಕಳ ಕಣ್ಣಲ್ಲಿ ಸುತ್ತಮುತ್ತಲ ಬೆಳಕು ಪ್ರತಿಫಲಿಸಿದಾಗ ಆ ಬೆಳಕು ನಮಗೂ ಬೇಕು ಅನ್ನಿಸಿದಾಗ ತಂದೆಯಾದವನು ಅದನ್ನ ನೀಡಲೇಬೇಕು. ಹಾಗಾಗಿ ಹಬ್ಬ ಭಯವೇನಿಸ್ತಾಯಿದೆ. ಪ್ರತೀ ಹಬ್ಬಕ್ಕೂ ಸಾಲ ಮಾಡ್ತಾ ಹೋದ್ರೆ ಮುಂದೆ ಮಕ್ಕಳ ಕನಸುಗಳಿಗೆ ದೊಡ್ಡ ದೊಡ್ಡ ಸಾಲಗಳನ್ನು ಮಾಡುವುದಾದರೂ ಹೇಗೆ? ಹಾಗಾಗಿ ಹಬ್ಬಗಳೆಲ್ಲ ಹಾಗೆ ದೂರದಿಂದ ಓಡಿ ಹೋಗಲಿ ಅಥವಾ ನನ್ನ ದುಡಿಮೆಯ ಶಕ್ತಿ ಹೆಚ್ಚಾದಾಗ ಹಬ್ಬಗಳು ಹತ್ತಿರ ಬರಲಿ. ಮಕ್ಕಳ ಕಣ್ಣಲ್ಲಿ ನೋವಿನ ಕಣ್ಣೀರು ನೋಡ್ತಾ ನಿಲ್ಲೋದಕ್ಕೆ ಸಾಧ್ಯ ಇಲ್ಲ. ಅದಕ್ಕೆ ಹಬ್ಬ ಅಂದ್ರೆ ಭಯ ಆಗ್ತಾ ಇದೆ.. ಈ ದಿನ ಅಂಗಳದಲ್ಲಿ ಕೆಲಸ ಮಾಡ್ತಾ ಇದ್ದ  ಕೂಲಿ ಕೆಲಸದ ನಂಜಪ್ಪನ ಮಾತು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ