ಸ್ಟೇಟಸ್ ಕತೆಗಳು (ಭಾಗ ೮೪೮)- ನಾಯಿ

ಸ್ಟೇಟಸ್ ಕತೆಗಳು (ಭಾಗ ೮೪೮)- ನಾಯಿ

ಆ ನಾಯಿ ಬೀದಿಯಲ್ಲಿ ನಿಂತು ಜೋರಾಗಿ ಅರಚುತ್ತಿದೆ. ರಸ್ತೆಯಲ್ಲಿ ಓಡಾಡುವ ಎಲ್ಲಾ ವಾಹನಗಳನ್ನು ನೋಡಿ ನೋಡಿ ಜೋರು ಜೋರಾಗಿ ಬೊಗಳುತ್ತಿದೆ. ತಾನು ನಿಂತ ಪಕ್ಕದಲ್ಲಿರುವ ಮರದ ಬುಡದ ಬಳಿ ಯಾರಾದರೂ ಬಂದ್ರೆ ಅವರನ್ನು ದೂರಕ್ಕೆ ಓಡಿಸುತ್ತಿದೆ. ಅದರ ಒಂದು ಮರಿ ಅದೇ ರಸ್ತೆಯಲ್ಲಿ ಓಡಾಡುವ ಯಾವುದೋ ಗಾಡಿಯ ಅಡಿಗೆ ಬಿದ್ದು ತನ್ನ ಪ್ರಾಣವನ್ನ ಕಳೆದುಕೊಂಡಿತ್ತು. ದಾರಿಯಲ್ಲಿ ಹೋಗುವ ಯಾವುದೋ ಹುಡುಗ ಆ ಪುಟ್ಟ ನಾಯಿಯ ಮೇಲೆ ಕಲ್ಲು ಬಿಸಾಡಿದ ಕಾರಣ ಹೆದರಿ ಅದು ರಸ್ತೆಗೆ ಬಂದಿತ್ತು, ಅದಕ್ಕೆ ಗೊತ್ತಿರಲಿಲ್ಲ ವೇಗವಾಗಿ ಬರುವ ರಸ್ತೆಯ ಮೇಲಿನ ವಾಹನಗಳು ತನ್ನನ್ನು ಗಮನಿಸದೇ ಸಾಗಿ ಹೋಗುತ್ತದೆ ಅಂತ. ಆ ಕ್ಷಣದಿಂದ ಉಳಿದೆರಡು ಮರಿಗಳನ್ನ ಉಳಿಸುವುದಕ್ಕೆ ಆ ನಾಯಿ ವಿಪರೀತ ಕಷ್ಟಪಡುತ್ತಿದೆ. ಒಂದು ಕ್ಷಣ ಬಿಟ್ಟು ಹೋದರೆ ಎಲ್ಲಿ ತನ್ನ ಮರಿಗಳು ತನ್ನನ್ನು ಬಿಟ್ಟು ಹೋಗುತ್ತವೋ ಅನ್ನುವ ಭಯದಲ್ಲಿ ಜೋರು ಜೋರಾಗಿ ಓಡಿ ಹೋಗಿ ಸಿಕ್ಕಿದ್ದನ್ನು ತಂದು ಮಕ್ಕಳಿಗೆ ನೀಡುತ್ತಿದೆ. ನಾಯಿಯ  ಪೂರ್ಣವಾಗಿ ಕೃಷವಾಗಿ ಬಿಟ್ಟಿದೆ. ಆದರೂ ಕೂಡ ತನ್ನ ಮರಿಗಳನ್ನ ತುಂಬಾ ಪ್ರೀತಿಯಿಂದ ಕಾಯ್ತಾ ಇದ್ದಾವೆ. ಮರಿಗಳಿಗೆ ಅಮ್ಮನ ಭಯ ಗೊತ್ತಿಲ್ಲ ಅಮ್ಮನ ಹೆದರಿಕೆ ಗೊತ್ತಿಲ್ಲ. ಅಮ್ಮ ಹೀಗಾಗುವುದಕ್ಕೆ ಕಾರಣವೂ ಗೊತ್ತಿಲ್ಲ ಅವುಗಳು ಮಾತ್ರ ಮತ್ತಷ್ಟು ಖುಷಿಯಿಂದ ಅಲ್ಲೇ ಓಡಾಡುತ್ತಿದ್ದಾವೆ. ಒಟ್ಟಿನಲ್ಲಿ ಆ ನಾಯಿ ತನ್ನ ದೇಹದಲ್ಲಿ ಉಸಿರು ಇರುವವರೆಗೂ ಆ ಮಕ್ಕಳನ್ನು ಕಾಯುತ್ತದೆ. ಆ ಮರಿಗಳು ಸ್ವಂತ ಕಾಲ ಮೇಲೆ ಆದಷ್ಟು ಬೇಗ ನಿಂತು ಬಿಟ್ಟರೆ ತಾಯಿಯ ಆರೋಗ್ಯ ಸುಧಾರಿಸಿ ಮಕ್ಕಳೊಂದಿಗೆ ಇನ್ನೊಂದಷ್ಟು ಹೆಚ್ಚು ದಿನ ಬದುಕುವ ಅವಕಾಶ ಇರುತ್ತದೆ. ಭಗವಂತನ ನಿರ್ಣಯ ಏನಿದೆಯೋ ಗೊತ್ತಿಲ್ಲ…!

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ