ಸ್ಟೇಟಸ್ ಕತೆಗಳು (ಭಾಗ ೮೪೯)- ತೊಟ್ಟಿಲು

ಸ್ಟೇಟಸ್ ಕತೆಗಳು (ಭಾಗ ೮೪೯)- ತೊಟ್ಟಿಲು

ಅಲ್ಲಿ ತೊಟ್ಟಿಲುಗಳನ್ನು ಮಾಡುತ್ತಾರೆ. ಪುಟ್ಟ ಮಕ್ಕಳನ್ನ ಅದರ ಮೇಲೆ ಮಲಗಿಸಿ ಜೋಗುಳವನ್ನ ಹಾಡಿ ಅವರ ಚಂದಕ್ಕೆ ಕಾರಣವಾಗುವ ತೊಟ್ಟಿಲನ್ನು ಅಲ್ಲಿ ಮಾಡುತ್ತಾರೆ. ಅದು ಭಗವಂತನಿಗೂ ಗೊತ್ತು. ಭಗವಂತ ತೊಟ್ಟಿಲುಗಳ ಲೆಕ್ಕವನ್ನು ಪ್ರತಿದಿನ ಮಾಡ್ತಾ ಇರ್ತಾನೆ. ಕಾರಣವಿಷ್ಟೇ ಪ್ರತಿದಿನವೂ ಒಂದು ತೊಟ್ಟಿಲು ಹೆಚ್ಚಾಗುತ್ತಾ ಹೋದ ಹಾಗೆ ಊರಿನ ಸ್ಮಶಾನದಲ್ಲಿ ಜಾಗವೊಂದನ್ನು ನಿಗದಿ ಮಾಡಿಬಿಡುತ್ತಾನೆ. ಆತನ ಸಾವಿನ ದಿನವನ್ನು ಸಾವಿಗೆ ಕಾರಣವನ್ನು ಬರೆದಿಡುತ್ತಾನೆ. ಇನ್ಯಾವ ಜಾಗದಲ್ಲಿ ಅವರಿಗೊಂದು ಮರಣದ ಜಾಗವನ್ನ ನೀಡಬೇಕು ಅನ್ನೋದನ್ನ ನಿರ್ಧರಿಸುತ್ತಾನೆ. ಹಾಗಾಗಿ ಭಗವಂತ ಎಷ್ಟು ತೊಟ್ಟಿಲುಗಳು ನಿರ್ಮಾಣವಾಗಿದೆಯೋ ಅಷ್ಟೇ ಸಾವುಗಳಿಗೂ ಜಾಗವನ್ನು ಖರೀದಿಸಿ ಬಿಟ್ಟಿದ್ದಾನೆ. ತೊಟ್ಟಿಲಲ್ಲಿ ಮಲಗಿರುವ ಆ ಮಗುವಿಗೆ ತನ್ನ ಹೆಸರಲ್ಲಿ ಗೊತ್ತಾದ ಜಾಗದ ಬಗ್ಗೆ ಅರಿವಿಲ್ಲ. ನಮ್ಮದು ಹಾಗೆ ಯಾವ್ಯಾವ ಸ್ಥಳದಲ್ಲಿ ಯಾವ ಯಾವ ರೀತಿಯ ಗೋರಿಗಳು ನೆನಪಿನ ಸ್ಥಳಗಳು ನಿರ್ಮಾಣವಾಗುತ್ತವೆಯೋ ಅರಿವಿಲ್ಲ. ಒಟ್ಟಿನಲ್ಲಿ ಪಯಣ ಅಲ್ಲಿಯವರೆಗೆ. ನಮಗೆ ಕೊನೆಯ ನಿಲ್ದಾಣದ ಬಗ್ಗೆ ಗೊತ್ತಿದೆ .ಹಾಗಾಗಿ ಎಲ್ಲ ನಿಲ್ದಾಣಗಳಲ್ಲಿ ಇಳಿದು ಎಲ್ಲವನ್ನು ತಿಳಿದುಕೊಂಡು ಅನುಭವಿಸಿಕೊಂಡು ಕೊನೆಯ ನಿಲ್ದಾಣದ ಕಡೆಗೆ ಪಯಣ ಹೊರಟಿದ್ದೇವೆ. ಹೀಗೆ ಒಬ್ಬನೇ ಅಲ್ಲಲ್ಲಿ ನಿಂತು ಮಾತನಾಡುತ್ತಿದ್ದ. ಆತನನ್ನ ನೋಡಿದ್ರೆ ಬುದ್ಧಿ ಇಲ್ಲದವನ ತರ ಕಾಣ್ತಾ ಇದ್ದಾನೆ,  ಆದರೆ ಅವನ ಮಾತುಗಳು ಬುದ್ದಿ ಹೇಳುವ ಹಾಗೆ ಇತ್ತು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ