ಸ್ಟೇಟಸ್ ಕತೆಗಳು (ಭಾಗ ೮೫೦)- ನಾಯಿ ಮಾತು

ಸ್ಟೇಟಸ್ ಕತೆಗಳು (ಭಾಗ ೮೫೦)- ನಾಯಿ ಮಾತು

ನನಗೆ ಯಾರಾದರೂ ಈ ಪ್ರಾಣಿಗಳ ಭಾಷೆ ಹೇಳಿಕೊಡಿ ಮಾರ್ರೆ. ಯಾಕಂದ್ರೆ ನಮ್ಮ ಮನೆಯ ಮುಂದಿನ ರಸ್ತೆಯನ್ನ ದಾಟಿದ ನಂತರ ಒಂದು ಸಣ್ಣ ಓಣಿ ಇದೆ. ಅದನ್ನು ದಾಟುವಾಗ ಒಂದಷ್ಟು ಮನೆಗಳು ಅದಾದ ನಂತರ ದೊಡ್ಡ ರಸ್ತೆ ಸಿಗ್ತದೆ. ಹೆಚ್ಚಿನ ಜನ ರಸ್ತೆಯಲ್ಲಿ ಸುತ್ತುವರಿಯುವುದನ್ನು ಬಿಟ್ಟು ಈ ಓಣಿಯಲ್ಲಿ ಸಾಗಿಕೊಂಡು ಹೋಗುತ್ತಾರೆ. ನಾನು ಪ್ರತಿದಿನ ಅದೇ ರಸ್ತೆಯಲ್ಲಿ ಸಾಗುವವ. ಮೊನ್ನೆ ತಾನೆ ಅಲ್ಲಿ ಒಂದು ಸಣ್ಣ ನಾಯಿಯನ್ನು ನೋಡಿದೆ. ತುಂಬಾ ವಯಸ್ಸಾದದ್ದಲ್ಲ. ಪ್ರತಿ ಸಲ ನನ್ನನ್ನು ನೋಡಿ ಸ್ವಲ್ಪ ಹೊತ್ತು ಸುತ್ತಮುತ್ತ ಓಡಾಡಿ ಸಣ್ಣದಾಗಿ ಬೊಗಳಿ ಏನನ್ನು ಹೇಳುವುದಕ್ಕೆ ಪ್ರಯತ್ನಿಸುತ್ತಿತ್ತು. ನನ್ನ ಮೇಲೆ ಅದಕ್ಕೆ ಪ್ರೀತಿ ಇದೆ ಅನ್ನೋದು ಗೊತ್ತಾಗ್ತಾಯಿತ್ತು. ಅದಕ್ಕೆ ತಿನ್ನೋದಕ್ಕೆ ಬೇಕು ಅನ್ನೋ ಕಾರಣಕ್ಕೆ ಪ್ರತಿದಿನವೂ ಏನಾದರೂ ಒಂದನ್ನು ತಂದು ಇಡ್ತಾ ಇದ್ದೆ. ಮರುದಿನಕ್ಕೆ ಅದು ಖಾಲಿ ಆಗ್ತಾ ಇತ್ತು. ನಾನೇನು ಒಳ್ಳೆ ಕೆಲಸ ಮಾಡ್ತಾ ಇದ್ದೀನಿ ಅಂತ ಅಂದುಕೊಂಡಿದ್ದೆ .ಆದರೆ ಒಂದು ದಿನ ನಾನು ಹಾಕಿದ ತಿಂಡಿಯನ್ನ ಇನ್ಯಾವುದೋ ನಾಯಿ ಬಂದು ತಿಂದಾಗ ಈ ನಾಯಿ ನಾನು ಹಾಕುವ ತಿಂಡಿಯನ್ನು ತಿನ್ನೋದಿಲ್ಲ ಅಂತ ಗೊತ್ತಾಯ್ತು. ಆದರೆ ನನ್ನ ಬಳಿ ಅಷ್ಟು ಪ್ರೀತಿಯಿಂದ ಏನನ್ನು ಹೇಳುವುದಕ್ಕೆ ಪ್ರಯತ್ನಿಸ್ತಾ ಇದೆ  ಅಂತ ಅರ್ಥ ಆಗ್ಲಿಲ್ಲ. ಆದರೆ ಕೆಲವು ದಿನಗಳ ನಂತರ ನಾನು ಅದೇ ದಾರಿಯಲ್ಲಿ ಹೋಗುವಾಗ ನಾಯಿ ದೂರದ್ದಲ್ಲಿ ಮೌನವಾಗಿ ಕುಳಿತುಬಿಟ್ಟಿತ್ತು. ಅದು ಕುಳಿತ ಜಾಗಕ್ಕಿಂತ ಸ್ವಲ್ಪ ದೂರದಲ್ಲಿ ಅದರ ಕೃಶವಾದ ಎರಡು ಸಣ್ಣ ನಾಯಿ ಮರಿಗಳು ಸಾಯುವ ಸ್ಥಿತಿಯಲ್ಲಿದ್ದು ಅದನ್ನು ಉಳಿಸುವುದಕ್ಕೆ ಏನಾದರೂ ಪ್ರಯತ್ನಪಡೋಣ ಅಂದುಕೊಂಡು ಡಾಕ್ಟರ್ ಒಬ್ಬರ ಬಳಿ ತೆಗೆದುಕೊಂಡು ಹೋಗಿ ಬಿಟ್ಟೆ. ಚಿಕಿತ್ಸೆ ಶುರುವಾಯಿತು. ಪ್ರಾಣ ಉಳಿಯಬಹುದು. ಆದರೆ ನಾಯಿಯ ಅವತ್ತಿನ ಮಾತು ನನಗೆ ಅರ್ಥವಾಗಿದ್ದಿದ್ದರೆ ಆ ಸಣ್ಣ ಮರಿಗಳು ಆರೋಗ್ಯವಾಗಿ ಇರುತ್ತಿದ್ದವು. ನನ್ನ ಮನಸ್ಸಿಗೆ ಬಂದ ಯೋಚನೆಯೇ ಸರಿ ಅಂತ ಅಂದುಕೊಂಡುಬಿಟ್ಟನಲ್ಲ ಅಂತ ಬೇಜಾರು. ಹಾಗಾಗಿ ಭಗವಂತನ ಬಳಿ ಬೇಡಿಕೊಳ್ಳುವುದಿಷ್ಟೇ ಪ್ರಾಣಿಗಳ ಮಾತು ಒಂದಷ್ಟು ಮನುಷ್ಯರ ಮನಸ್ಸಿಗೆ ಅರ್ಥ ಆಗುವ ಹಾಗೇ ಮಾಡು ದೇವರೇ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ