ಸ್ಟೇಟಸ್ ಕತೆಗಳು (ಭಾಗ ೮೫೧)- ಪ್ರಶ್ನೆ
ಪ್ರತಿದಿನವೂ ಕಣ್ಣ ಮುಂದೆ ಕಥೆಗಾಗಿ ಹುಡುಕಾಡುತ್ತಿರುತ್ತೇನೆ. ತುಂಬಾ ಹುಡುಕಾಡಿದರೂ ಈ ದಿನ ಯಾವುದೇ ರೀತಿಯ ಕಥೆ ಸಿಗಲಿಲ್ಲ ಹಾಗಾಗಿ ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದಾಗ ನನ್ನ ಹಿಂದಿನ ಕಲ್ಲು ಬೆಂಚಿನ ಮೇಲೆ ಕುಳಿತಿದ್ದ ಇಬ್ಬರ ಮಾತುಗಳು ಹೀಗಿದ್ದವು. ಹಲೋ ಮಾರಾಯ ನಿನಗೆ ಯಾರು ಹೇಳಿದ್ದು ನಿನ್ನ ಕೈ ಮೀರುವಷ್ಟು ಸಾಲ ಮಾಡುವಂತೆ, ನಿನ್ನ ಆಸೆಗಳಿಗೆಲ್ಲ ವಿಪರೀತ ಸಾಲ ಮಾಡಿ ಈಗ ಕಟ್ಟೋಕೆ ಆಗದಿರುವ ಪರಿಸ್ಥಿತಿಗೆ ಬಂದಿದೆ. ಮನೆ ಸರಿಯಾಗಬೇಕು ಮನೆಯೊಳಗಿನ ವಸ್ತುಗಳು ಬದಲಾಗಬೇಕು, ಒಂದಿಷ್ಟು ಅಭಿವೃದ್ಧಿ ಅಂತ ಅನ್ನಿಸಬೇಕು ಅನ್ನುವ ಕಾರಣಕ್ಕೆ ಸಾಲಗಳನ್ನ ಮಾಡಿ ಈಗ ಕಷ್ಟ ಪಡ್ತಾ ಇದ್ದೀಯಾ? ಅದಕ್ಕೆ ದೊಡ್ಡವರು ಹೇಳಿದ್ದು ಹಾಸಿಗೆ ಇದ್ದಷ್ಟು ಕಾಲು ಚಾಚು ಅಂತ" "
ನೋಡು ಮಾರಾಯ ಈ ಹಾಸಿಗೆ ಇದ್ದಷ್ಟು ಕಾಲು ಚಾಚು ಇದೆಯಲ್ಲ ಇದರ ಕಾಲ ಹಳೆಯದಾಗಿದೆ. ಪ್ರಸ್ತುತ ಸರಿಯಾದ ಆಕಾರದ ಹೆಚ್ಚು ಬಾಳಿಕೆ ಬರುವಂತಹ ಹಾಸಿಗೆ ನಾವೇ ತಯಾರು ಮಾಡಿಕೊಳ್ಳಬೇಕು. ಯಾರೋ ತಯಾರು ಮಾಡಿರುವ ಹಾಸಿಗೆಯಲ್ಲಿ ಹೋಗಿ ನಾವು ಮಲಗುವುದಲ್ಲ ಇದು ನಾನು ನಂಬಿರುವ ಮಾತು. ಕಷ್ಟವನ್ನು ಅನುಭವಿಸುತ್ತೇನೆ ಒಂದು ದಿನ ಎಲ್ಲವೂ ಬದಲಾಗುತ್ತೆ. ನೀನು ಏನು ಬೇಕಾದರೂ ಅನ್ಕೋ, ಬಾ ಈಗ ಟೀ ಕುಡಿಯೋಣ" ಅಂತ ಹೊರಟರು. ನಾನು ಇವರಿಬ್ಬರಲ್ಲಿ ಯಾರ ಮಾತನ್ನು ಒಪ್ಪಿಕೊಳ್ಳಬೇಕು.. ನೀವಾಗಿದ್ರೆ ಯಾರ ಮಾತನ್ನು ಒಪ್ಪಿಕೊಳ್ಳುತ್ತಾ ಇದ್ರಿ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ